ಮಣ್ಣು ಉಳಿಸಿ ಅಭಿಯಾನ ರಾಜ್ಯಾದ್ಯಂತ ವಿಸ್ತರಿಸಬೇಕಿದೆ: ಎನ್.ಶ್ರೀನಿವಾಸನ್

KannadaprabhaNewsNetwork |  
Published : Jan 14, 2025, 01:01 AM IST
9 | Kannada Prabha

ಸಾರಾಂಶ

ಮನುಷ್ಯ ಬದುಕಲು ಆಹಾರ ಮುಖ್ಯ. ಆಹಾರ ಬೆಳೆಯಲು ಭೂಮಿಯನ್ನು ಉಳಿಸಿಕೊಳ್ಳುವುದು ಮುಖ್ಯ. ಆದರೆ, ಆಧುನಿಕ ಮತ್ತು ವೈಜ್ಞಾನಿಕ ಯುಗ ವೇಗವಾಗಿ ಬೆಳೆಯುತ್ತಿದ್ದು, ಭೂಮಿಯನ್ನು ಕೊಲ್ಲುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಕಂಪ್ಯೂಟರ್, ಮೊಬೈಲ್ ಗಳನ್ನು ತಿನ್ನಬೇಕಾದ ಪರಿಸ್ಥಿತಿ ಬರಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಇಂಧನ ಉಳಿಸಿ, ನೀರು ಉಳಿಸಿ, ಮರ ಉಳಿಸಿ ಅಭಿಯಾನಗಳು ಯಶಸ್ವಿಯಾಗಿವೆ. ಅದೇ ರೀತಿಯಲ್ಲಿ ಮಣ್ಣು ಉಳಿಸಿ ಅಭಿಯಾನವನ್ನು ರಾಜ್ಯ ವ್ಯಾಪಿ ವಿಸ್ತರಿಸಬೇಕಾದ ಅಗತ್ಯವಿದೆ ಎಂದು ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಉತ್ತಿಷ್ಠ ಭಾರತ ಪ್ರತಿಷ್ಠಾನವು ಸೋಮವಾರ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಹಾಗೂ ಮಣ್ಣು ಉಳಿಸಿ- ಜನ ಜಾಗೃತಿ ವಾರ್ಷಿಕ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಲ್ಲಿ ಮರಗಳನ್ನು ಕಡಿದು ಅಪಾರ್ಟ್ ಮೆಂಟ್ ನಿರ್ಮಿಸಿ, ಅದರ ಮೇಲೆ ರೂಫ್ ಗಾರ್ಡನ್ ಮಾಡಲಾಗುತ್ತಿದೆ. ಭೂಮಿಯನ್ನು ಕೊಲ್ಲುತ್ತಾ ಹೋದರೆ ಮುಂದೊಂದು ದಿನ ರೂಫ್ ಅಗ್ರಿಕಲ್ಚರ್ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮನುಷ್ಯ ಬದುಕಲು ಆಹಾರ ಮುಖ್ಯ. ಆಹಾರ ಬೆಳೆಯಲು ಭೂಮಿಯನ್ನು ಉಳಿಸಿಕೊಳ್ಳುವುದು ಮುಖ್ಯ. ಆದರೆ, ಆಧುನಿಕ ಮತ್ತು ವೈಜ್ಞಾನಿಕ ಯುಗ ವೇಗವಾಗಿ ಬೆಳೆಯುತ್ತಿದ್ದು, ಭೂಮಿಯನ್ನು ಕೊಲ್ಲುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ಕಂಪ್ಯೂಟರ್, ಮೊಬೈಲ್ ಗಳನ್ನು ತಿನ್ನಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಭೂಮಿಯ ಆರೋಗ್ಯ ಹಾಳು:

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಹಸಿರು ಕ್ರಾಂತಿಯ ಬಳಿಕ ಹೆಚ್ಚು ಹೆಚ್ಚು ಬೆಳೆಯುವ ಸಲುವಾಗಿ ಕೃಷಿಗೆ ಯಥೇಚ್ಚ ರಸಗೊಬ್ಬರವನ್ನು ಬಳಸುವ ಮೂಲಕ ಭೂಮಿಗೆ ವಿಷ ಉಣಿಸುತ್ತಿದ್ದೇವೆ. ಇದರಿಂದಾಗಿ ನಮ್ಮ ಆರೋಗ್ಯದ ಜೊತೆಗೆ ಭೂಮಿಯ ಆರೋಗ್ಯವನ್ನೂ ಹಾಳು ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ ಅನ್ನದಾತ ರೈತ ಮತ್ತು ಗಡಿಕಾಯುವ ಸೈನಿಕ ಇಬ್ಬರೂ ಮುಖ್ಯ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ರೈತ ಕೂಡ ಕೃಷಿಯನ್ನು ಕೈಬಿಟ್ಟಿದ್ದರೆ ತಿನ್ನಲು ಅನ್ನ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ರೈತರಿಗೆ ವಿದ್ಯುತ್, ನೀರು, ಗೊಬ್ಬರ, ಬಿತ್ತನೆ ಬೀಜ ನೀಡಿದರೆ ಯಾರ ಮನೆ ಬಾಗಿಲು ಕಾಯದೆ ಕೃಷಿ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಹೊಟ್ಟೆ-ಬಟ್ಟೆಗೆ ಸಾಕಾಗುವಷ್ಟು ಬೆಳೆಯುವುದನ್ನು ಬಿಟ್ಟು, ವಾಣಿಜ್ಯ ಬೆಳೆಗಳ ಹಿಂದೆ ಬಿದ್ದಿರುವ ಮಾನವನ ದುರಾಸೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಭೂಮಿಯ ಸಾರವನ್ನು ಕಾಪಾಡುವ ಬಗ್ಗೆ ಯುವ ಜನರಿಗೆ ತಿಳವಳಿಕೆ ಮೂಡಿಸಬೇಕಿದೆ ಎಂದರು.

ಇದೇ ವೇಳೆ ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಸಿ. ಚಂದನ್ ಗೌಡ ಅವರಿಗೆ ‘ಮಣ್ಣಿನ ಶ್ರೇಷ್ಠ ಮಗ’ ಪ್ರಶಸ್ತಿ ಮತ್ತು ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉತ್ತಿಷ್ಠ ಭಾರತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ವಿ. ನಾಗೇಂದ್ರಬಾಬು, ಕಾರ್ಯಕಾರಿ ಸಮಿತಿ ಸದಸ್ಯ ಎನ್. ಅನಂತ, ರಾಜೇಶ್ ಮೊದಲಾದವರು ಇದ್ದರು.

ಜಗತ್ತು 2 ಮಹಾಯುದ್ಧಗಳನ್ನು ಕಂಡಿದೆ. ತುತ್ತು ಅನ್ನಕ್ಕೆ ಮತ್ತು ಹಿಡಿ ಮಣ್ಣಿಗಾಗಿ 3ನೇ ಮಹಾಯುದ್ಧ ನಡೆಯುವ ದಿನಗಳು ದೂರವಿಲ್ಲ. ಇಡೀ ಜೀವರಾಶಿ ಬದುಕಲು ಮಣ್ಣನ್ನು ರಕ್ಷಿಸಬೇಕಿದೆ. ನಮಗೆ ಅನ್ನ- ಚಿನ್ನವನ್ನು ಕೊಟ್ಟ ಮಣ್ಣನ್ನು ಪೂಜಿಸಬೇಕು. ಆದರೆ, ಶೇ.98 ರಷ್ಟು ಜನರಿಗೆ ಮಣ್ಣಿನ ಮಹತ್ವವೇ ತಿಳಿದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಣ್ಣು ಸಂರಕ್ಷಣೆ ಕಾಯ್ದೆಯನ್ನು ರೂಪಿಸಬೇಕು.

- ಸಿ. ಚಂದನ್ ಗೌಡ, ರಾಜ್ಯಾಧ್ಯಕ್ಷರು, ರೈತ ಕಲ್ಯಾಣ ಸಂಘ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ