ಕನ್ನಡಪ್ರಭ ವಾರ್ತೆ ಖಾನಾಪುರ
ಇಂದಿನ ವೇಗದ ಯುಗದ ಆರ್ಥಿಕ ಅಭಿವೃದ್ಧಿ ಕುರಿತ ಚಿಂತನೆ ಕೈಬಿಟ್ಟು ನಮ್ಮ ಮುಂದಿನ ಪೀಳಿಗೆಯ ನೆಮ್ಮದಿಯ ಭವಿಷ್ಯಕ್ಕಾಗಿ ಪರಿಸರ ಉಳಿಸುವ ಅಗತ್ಯವಿದೆ ಎಂದು ಪರಿಸರ ಹೋರಾಟಗಾರ ಹಾಗೂ ಹಿರಿಯ ಕಲಾವಿದ ಸುರೇಶ ಹೆಬ್ಳಿಕರ ಪ್ರತಿಪಾದಿಸಿದರು.ತಾಲೂಕಿನ ಹೆಮ್ಮಡಗಾ ಬಳಿಯ ಭೀಮಗಡ ಪ್ರಕೃತಿ ಶಿಬಿರದ ಸಭಾಗೃಹದಲ್ಲಿ ಕರುನಾಡು ಕನ್ನಡ ಸಂಘ ಖಾನಾಪುರ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕರುನಾಡು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮೆಜಾನ್ ಹೊರತುಪಡಿಸಿದರೆ ವಿಶ್ವದ ಅತ್ಯಂತ ದೊಡ್ಡ ಕಾಡು ನಮ್ಮ ಪಶ್ಚಿಮ ಘಟ್ಟ. ಇದು 6 ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, 65 ನದಿಗಳ ಉಗಮಸ್ಥಾನವಾಗಿದೆ. ನಮ್ಮ ಮುಂದಿನ ನಿಶ್ಚಿತ ಭವಿಷ್ಯಕ್ಕಾಗಿ ಪಶ್ಚಿಮ ಘಟ್ಟ ಉಳಿಸಿ ಸಂರಕ್ಷಿಸುವ ಅಗತ್ಯವಿದೆ ಎಂದರು.ಸಮೀಕ್ಷೆ ಒಂದರ ಪ್ರಕಾರ ಜನಸಂಖ್ಯೆ ಹೆಚ್ಚಳ, ಯುವಕರಲ್ಲಿ ಹೆಚ್ಚುತ್ತಿರುವ ಬೇಡಿಕೆಗಳು, ಧಿಡೀರ್ ಶ್ರೀಮಂತ ಆಗುವ ಬಯಕೆ, ಆರ್ಥಿಕ ಮತ್ತು ಔದ್ಯೋಗಿಕ ಚಟುವಟಿಕೆಗಳ ಮೇಲೆ ಕಡಿವಾಣ ಇಲ್ಲದಿರುವುದು ಪರಿಸರ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತಿವೆ. ಇದಕ್ಕೆ ಪರಿಹಾರವಾಗಿ ಪರಿಸರಕ್ಕೆ ಪೂರಕ ವಾತಾವರಣ ನಿರ್ಮಾಣ ಆಗಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ಎಸಿಎಫ್ ಸುನೀತಾ ನಿಂಬರಗಿ, ಭೀಮಗಡ ಅರಣ್ಯದಲ್ಲಿ ಅಪರೂಪದ ತೊಗಲು ಬಾವಲಿಗಳು ವಾಸಿಸುವ ಕಾರಣ ಇದನ್ನು ವನ್ಯಧಾಮ ಎಂದು ಘೋಷಿಸಲಾಗಿದೆ. ತೊಗಲು ಬಾವಲಿಗಳು ಪರಾಗಸ್ಪರ್ಶ ಮಾಡುವ ಮೂಲಕ ಬೆಳೆಗಳು ಬೆಳೆಯಲು ಸಹಾಯ ಮಾಡಿ ನಮಗೆ ಊಟ ಒದಗಿಸುವ ಪರೋಕ್ಷ ಕೆಲಸ ಮಾಡುತ್ತಿವೆ. 17ನೇ ಶತಮಾನದಲ್ಲಿ ಶಿವಾಜಿ ಮಹಾರಾಜ ಕಟ್ಟಿಸಿದ ಭೀಮಗಡ ಕೋಟೆಯಿಂದಾಗಿ ಈ ವನ್ಯಧಾಮಕ್ಕೆ ಭೀಮಗಡ ವನ್ಯಧಾಮ ಎಂದು ಹೆಸರಿಸಲಾಗಿದೆ ಎಂದು ವಿವರಿಸಿದರು.ಕರುನಾಡು ಕನ್ನಡ ಸಂಘದ ಅಧ್ಯಕ್ಷ ಜಗದೀಶ ಹೊಸಮನಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ.ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಿಇಒ ಅಪ್ಪಣ್ಣ ಅಂಬಗಿ, ಶಿರಸಿ ಪ್ರಾದೇಶಿಕ ಅರಣ್ಯದ ಎಸಿಎಫ್ ಎಸ್.ಎಸ್ ನಿಂಗಾಣಿ, ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹೂತ, ವಕೀಲರ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಎನ್‌ಆರ್‌ಇ ಸಂಸ್ಥೆಯ ಸಿ.ಜಿ ವಾಲಿ, ರೈತ ಮುಖಂಡ ಮಲ್ಲಿಕಾರ್ಜುನ ವಾಲಿ, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ವಿದ್ಯಾಧರ ಬನೋಶಿ, ನಿವೃತ್ತ ಅರಣ್ಯ ಅಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ನಡೆದ ಸಂಕಿರಣ ಗೋಷ್ಠಿಯಲ್ಲಿ ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ, ರಂಗಕರ್ಮಿ ಶಿರೀಷ ಜೋಶಿ ಮತ್ತಿತರರು ಭಾಷಾ ವೈವಿಧ್ಯ ಮತ್ತು ಪರಿಸರ ಹೋರಾಟ ಕುರಿತು ಮಾತನಾಡಿದರು. ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಡಾ.ಗುರುರಾಜ ಮನಗೂಳಿ ಹಳೆಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ ಶಿವಶಂಕರ ಕಟ್ಟೀಮನಿ ಮತ್ತು ಸಾಮಾಜಿಕ ಕಾರ್ಯಕರ್ತ ರವೀಂದ್ರ ಕಾಡಗಿ ಅವರನ್ನು ಸತ್ಕರಿಸಲಾಯಿತು. ಹೇಮಾ ಸೋನೊಳಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಯುವ ಕವಿಗಳು ಕವಿತೆಗಳನ್ನು ಪ್ರಸ್ತುತಪಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಎಚ್.ಐ ತಿಮ್ಮಾಪೂರ, ಆರ್‌ಎಫ್‌ಒ ಸಯ್ಯದಸಾಬ್ ನದಾಫ್, ವಿಶ್ರಾಂತ ಶಿಕ್ಷಕ ಶಿವಾನಂದ ಹುಕ್ಕೇರಿ, ವಿ.ಕೆ. ಪೂಜಾರ, ಶ್ರೀಧರ ತಂಬದಮನಿ, ಶಶಿಕಲಾ ಮಾವಿನಕೊಪ್ಪ, ಅಶ್ವಿನಿ ಕಾಡಗಿ, ಸುಭಾಷ ಸತ್ತಿಗೇರಿ, ಮಹಾಂತೇಶ ಹೊಸಮನಿ, ನಿಂಗಪ್ಪ ಮಂಡಿ, ರಾಜು ನೀರಲಗಿ, ಎಸ್.ಆರ್ ಹತ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಆಹ್ವಾನಿತರು, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಭೂ ತಾಪಮಾನ, ಹವಾಮಾನ ಬದಲಾವಣೆಗೆ ಪರಿಸರ ಹಾಳಾಗುತ್ತಿದ್ದು, ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶ ಆಗುತ್ತಿರುವುದನ್ನು ತಪ್ಪಿಸಬೇಕು. ದೊಡ್ಡ ದೊಡ್ಡ ಕಟ್ಟಡ ಕಟ್ಟುವುದು, ಕಾರ್ಖಾನೆ ನಡೆಸುವುದು, ವಾಹನ ಖರೀದಿಸುವುದು ಅಭಿವೃದ್ಧಿ ಎಂದು ಭಾವಿಸುವುದು ಮೂರ್ಖತನವಾಗಿದ್ದು, ಆರ್ಥಿಕ ಪ್ರಗತಿಯಿಂದ ದೇಶ ಉದ್ಧಾರ ಆಗಲ್ಲ ಎಂಬುದನ್ನು ಸರ್ವರೂ ಮನಗಾಣಬೇಕು. ಪರಿಸರ ನಾಶದಿಂದ ಉತ್ತಮ ಆಹಾರ ಮತ್ತು ನೀರು ಸಿಗದೇ ಅನಾರೋಗ್ಯ ಉಂಟಾಗುತ್ತಿದೆ. ಇದನ್ನು ಉದ್ಯಮಿಗಳು, ಸಿರಿವಂತರು, ಬುದ್ಧಿಜೀವಿಗಳು, ಸರ್ಕಾರಗಳು ಗಮನಿಸಬೇಕು.
-ಸುರೇಶ ಹೆಬ್ಳಿಕರ ಪರಿಸರ ಹೋರಟಗಾರ, ಕಲಾವಿದ.