ಕನ್ನಡಪ್ರಭ ವಾರ್ತೆ, ಚಾಮರಾಜನಗರ ಸಮಾಜ ಅಸಮಾನತೆಯಲ್ಲಿ ಬಳಲುತ್ತಾ ಕ್ಲಿಷ್ಟಕರ ಸನ್ನಿವೇಶದಲ್ಲಿದ್ದಾಗ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು.
ಪತಿ ಜ್ಯೋತಿಬಾ ಅವರಿಂದ ಪ್ರೇರಣೆ ಪಡೆದು ಅಕ್ಷರ ಕಲಿತು ಶಿಕ್ಷಕ ತರಬೇತಿ ಮುಗಿಸಿ, ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಪ್ರಾರಂಭಿಸಿ, ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಜೀವನ ರೋಚಕವಾದುದು. ಸಮಾಜದ ಬಹಿಷ್ಕಾರ ಹಾಗೂ ಹೆಜ್ಜೆ ಹೆಜ್ಜೆಗೂ ಅವಮಾನ ಅನುಭವಿಸಿದರೂ, ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಅವರನ್ನು ಎಂದೂ ಮರೆಯಬಾರದು ಎಂದು ಹೇಳಿದರು.
೧೮೪೮ರಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರ ಹೊಮ್ಮಿದ ಸಾವಿತ್ರಿ ಬಾಯಿ ಫುಲೆ ಹಿಂದುಳಿದ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುತ್ತಾರೆಂದು ಅವರ ಮೇಲೆ ಸೆಗಣಿ ಎರಚಲಾಯಿತು. ಕಲ್ಲುತೂರಲಾಯಿತು. ಇಂಥ ಅವಮಾನ ಸಹಿಸಿದ ಅವರ ಗಟ್ಟಿತನ ದೊಡ್ಡದು. ಅವರು ಚೀಲದಲ್ಲಿ ಎರಡು ಸೀರೆಯನ್ನು ಸದಾ ಇಟ್ಟುಕೊಳ್ಳುತ್ತಿದ್ದರು. ಶಾಲೆಯನ್ನು ಮೊದಲೇ ತಲುಪಿ ಸಗಣಿ ಎರಚಿದ ಸೀರೆ ಬಿಟ್ಟು, ಮತ್ತೊಂದು ಸೀರೆಯುಟ್ಟು ಪಾಠಕ್ಕೆ ಅಣಿಯಾಗುತ್ತಿದ್ದರು, ಇವರ ಹೆಸರಿನಲ್ಲಿ ಅಂಚೆ ಚೀಟಿಯು ಪ್ರಕಟಗೊಂಡಿದೆ ಇಂತಹ ಸಾವಿತ್ರಿಬಾಯಿ ಅವರು ನಮ್ಮೆಲ್ಲರಿಗೂ ಆದರ್ಶವಾಗಿರಲಿ ಎಂದರು.ಮಕ್ಕಳ ಉನ್ನತ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ಹೊರಡಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಇದು ಚುನಾವಣಾ ವರ್ಷ ಮತ್ತು ಶೌಚಾಲಯ ಸ್ವಚ್ಛತೆ ಬಗ್ಗೆ ಹಲವಾರು ವರದಿಗಳು ಪ್ರಕಟವಾಗುತ್ತಿವೆ, ಅತ್ಯಂತ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಿ ಸರ್ಕಾರಿ ಶಾಲೆಗಳನ್ನು ಉಳಿಸುವತ್ತ ಕಾರ್ಯೋನ್ಮುಖವಾಗಿರಿ ಎಂದು ಹೇಳಿದರು.
ಶೋಷಿತ ಸಮಾಜಕ್ಕೆ ಅಕ್ಷರ ಕಲಿಸಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ತಮ್ಮ ಮಾನ ಮರ್ಯಾದೆಗಳನ್ನು ಬದಿಗಿಟ್ಟು ಮಹಾನ್ ಗುರಿಯನ್ನು ಸಾಧಿಸಿದ ಅಪ್ರತಿಮಾ ಮಹಿಳೆ, ಮನುಶಾಸ್ತ್ರವನ್ನು ಧಿಕ್ಕರಿಸಿದ ದಂಪತಿಗಳು ತಮ್ಮ ಉಸಿರು ಇರುವವರೆಗೂ ಶಾಲೆಗಳನ್ನು ತೆರೆದು ಮಹಿಳೆಯರ ಮತ್ತು ಶೋಷಿಕರ ಶಿಕ್ಷಣಕ್ಕಾಗಿ ದುಡಿದವರು ಎಂದರು.
ಮಹಿಳೆಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಫುಲೆ ದಂಪತಿಗಳ ಹಂಬಲವಾಗಿತ್ತು. ಸಾವಿತ್ರಿಬಾಯಿ ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವದು, ಸಗಣಿ ಎರಚುವುದು, ಕಲ್ಲು ತೂರುವುದು ಸಾಮಾನ್ಯವಾಗಿತ್ತು. ಆದರೆ ಸಾವಿತ್ರಿಬಾಯಿ ಇವೆಲ್ಲವನ್ನು ಬಂಡೆಯಂತೆ ಗಟ್ಟಿಯಾಗಿ ನಿಂತು ಎದುರಿಸಿದರು.
ಸಾವಿತ್ರಿಬಾಯಿ ಪ್ಲೇಗ್ ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಅವರು ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ೧೮೯೭ರ ಮಾರ್ಚ್ ೧೦ರಂದು ನಿಧನ ರಾದರು. ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ತೋರಿದ ಅಪಾರ ಕಾಳಜಿ, ಸಾವಿತ್ರಿಬಾಯಿಯವರು ಮಾಡಿದ ಕಾರ್ಯ ಇಂದಿಗೂ ನಮಗೆ ಪ್ರೇರಣೆಯಾಗಿದೆ. ಸಾವಿತ್ರಿಬಾಯಿ ಫುಲೆ ನಮಗೆಲ್ಲರಿಗೂ ಆದರ್ಶ ಮಹಿಳೆಯಾಗಿದ್ದಾರೆ ಎಂದರು.
ಉತ್ತಮ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ, ನಿವೃತ್ತ ಶಿಕ್ಷಕರು ಹಾಗು ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
------------------
ಸಾವಿತ್ರಿಭಾಫುಲೆ ಜನ್ಮದಿನಾಚರಣೆ ಮತ್ತು ಸಾವಿತ್ರಿಭಾಯಿಫುಲೆ ಪ್ರಶಸ್ತಿ ಪ್ರಧಾನ ಹಾಗೂ ಕಲಿಕಾ ಬಲವರ್ಧನೆಗಾಗಿ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಕುರಿತ ಶೈಕ್ಷಣಿಕ ಕಾರ್ಯಗಾರವನ್ನು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಉದ್ಘಾಟಿಸಿದರು.