ಕನ್ನಡಪ್ರಭ ವಾರ್ತೆ ಸಿಂಧನೂರು
ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಬದುಕು ರೂಪಿಸಿದ ಸ್ವಾವಿತ್ರಿಬಾಯಿ ಫುಲೆ ಭಾರತದ ಮೊಟ್ಟ ಮೊದಲ ಶಿಕ್ಷಕಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಎಂದು ಉಪನ್ಯಾಸಕಿ ವಿಜಯಲಕ್ಷ್ಮಿ ಗುರಿಕಾರ ಹೇಳಿದರು.ತಾಲೂಕಿನ ಬುಕ್ಕನಟ್ಟಿ ಗ್ರಾಮದಲ್ಲಿ ದಲಿತ ಸಾಹಿತ್ಯ ಪರಿಷತ್ ಮತ್ತು ಯುವ ಘಟಕದ ವತಿಯಿಂದ ‘ಪರಿಷತ್ತಿನ ನಡೆ ಭಾವೈಕ್ಯತೆಯ ಕಡೆ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ‘ಸಾವಿತ್ರಿಬಾಯಿ ಫುಲೆಯವರ ಶಿಕ್ಷಣ ಮತ್ತು ಸಹಕಾರ’ ವಿಷಯ ಕುರಿತು ಅವರು ಮಾತನಾಡಿದರು.
ಬಾಲ್ಯವಿವಾಹ, ವಿಧವೆಯ ಮರುವಿವಾಹ ಮತ್ತು ಜಾತಿ ಆಧಾರಿತ ಶ್ರೇಣಿಯ ವಿರುದ್ಧದ ಅಭಿಯಾನ ನಡೆಸಿ ಸಮಸಮಾಜ ನಿರ್ಮಾಣಕ್ಕೆ ಫುಲೆ ದಂಪತಿ ಪ್ರಯತ್ನಿಸಿದರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕದ ಖಜಾಂಚಿ ಮಲ್ಲಿಕಾರ್ಜುನ ಕಾಮತಗಿ, ಯುವ ಘಟಕದ ನಿರ್ದೇಶಕ ವೆಂಕಟೇಶ್ ಬುಕ್ಕನಟ್ಟಿ, ಪರಿಷತ್ತಿನ ಖಜಾಂಚಿ ಶರಣಪ್ಪ ಹೊಸಳ್ಳಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಹುದ್ದೆಗೆ ಆಯ್ಕೆಯಾದ ಯುವಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪ್ರತಿನಿಧಿ ಈಶ್ವರ್ ಹಲಗಿ, ತಾಲೂಕು ಘಟಕದ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ, ಗೌರವ ಸಲಹೆಗಾರ ಮಂಜುನಾಥ ಗಾಂಧಿನಗರ, ಯುವ ಘಟಕದ ಅಧ್ಯಕ್ಷ ತಿಮ್ಮಪ್ಪ ಕಲ್ಮಂಗಿ, ಬುಕ್ಕನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಪ್ಪ, ಪದಾಧಿಕಾರಿಗಳಾದ ಆಂಜನೇಯ ರಾಮತ್ನಾಳ, ಬಿ.ರವಿಕುಮಾರ ಸಾಸಲಮರಿ, ಶಿವರಾಜ ಗುಡದಮ್ಮ ಕ್ಯಾಂಪ್, ಶಿವರಾಜ ಅಡಗಲ್ ಸಾಸಲಮರಿ, ಅಯ್ಯಪ್ಪ ಹರೇಟನೂರು ಇದ್ದರು. ತಿಮ್ಮಪ್ಪ ಕಲ್ಮಂಗಿ ಸ್ವಾಗತಿಸಿದರು. ಬಸವರಾಜ ಬಲುಗೊಡ್ಡ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.