ಕಾರಟಗಿ: ಎಲ್ಲ ನೋವು-ನಲಿವುಗಳನ್ನು ಅನುಭವಿಸಿ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ದೇಶದ ಅಕ್ಷರದ ಅವ್ವ ಸಾವಿತ್ರಿಬಾಯಿ ಅವರ ಆದರ್ಶಗಳು ಆದರ್ಶಪ್ರಾಯವಾಗಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಾವಿತ್ರಿಬಾಯಿ ಫುಲೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕ, ಶಿಕ್ಷಕ ಅಮರೇಶ ಮೈಲಾಪುರ ಹೇಳಿದರು.
ಶತಶತಮಾನಗಳಿಂದ ಶೋಷಣೆಗೆ ಒಳಗಾದ, ಅಕ್ಷರ ಜ್ಞಾನದಿಂದ ದೂರ ಉಳಿದ ಮಹಿಳೆಯರ ಪಾಲಿನ ನಂದಾದೀಪವಾಗಿ ಸಾವಿತ್ರಿಬಾಯಿ ಫುಲೆಯವರು ಸಮಾಜದಲ್ಲಿನ ಎಲ್ಲ ಅವಮಾನ ಸಹಿಸಿಕೊಂಡು ಮಹಿಳಾ ಜನಾಂಗಕ್ಕಾಗಿ ಹಗಲಿರುಳು ಶ್ರಮಿಸಿದರು ಎಂದು ಬಣ್ಣಿಸಿದರು.
ಮುಖ್ಯೋಪಾಧ್ಯಾಯ ಬಸಯ್ಯ ಮಠ ಮಾತನಾಡಿ, ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಎಂಬ ವಾಣಿಯಂತೆ ಪ್ರತಿಯೊಬ್ಬರು ಸಮಾಜದ ಬೆಳವಣಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣರಾಗಿರುತ್ತಾರೆ. ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗದೆ ಶಾಲೆಗೆ ಬಂದು ತಮ್ಮ ಏಳಿಗೆಯೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷ ಆಂಜನೇಯ ಬೇವಿನಾಳ ಮಾತನಾಡಿ, ತಾಲೂಕಿನಲ್ಲಿ ಏಕೈಕ ಬಾಲಕಿಯರ ಶಾಲೆ ನಮ್ಮದಾಗಿದೆ. ಪಾಲಕರೊಂದಿಗೆ ಚರ್ಚಿಸಿ, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಬಾಲಕಿಯರ ಪ್ರೌಢಶಾಲಾ ಪ್ರಾರಂಭಕ್ಕೆ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಉಮಾ, ಶಿಕ್ಷಕಿಯರಾದ ಪ್ರಮೀಳಾದೇವಿ ಅತಿಥಿ ಶಿಕ್ಷಕಿಯಾದ ಯಶೋಧಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಇದ್ದರು. ರಾಮಣ್ಣ ಹಳ್ಳಿಕೇರಿ ಮತ್ತು ಮಂಜುಳಾ ಜೋಗೇರ್ ನಿರ್ವಹಿಸಿದರು.