ಹುಬ್ಬಳ್ಳಿ:
ಕೇಶ್ವಾಪುರದಲ್ಲಿರುವ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಸಭಾಭವನ ಭಾನುವಾರ ಬೆಳಗ್ಗೆ ಇಂಥದೊಂದು ಕಲರವಕ್ಕೆ ಸಾಕ್ಷಿಯಾಗಿತ್ತು. ಹಿಂದಿನ ಮುಂಬೈ ರಾಜ್ಯದ ಶ್ರೇಷ್ಠನಟ ಪ್ರಶಸ್ತಿಗೆ ಭಾಜನರಾಗಿದ್ದ ಡಾ. ಶ್ರೀನಿವಾಸ ಪರ್ವತಿ ಅವರ ಜೀವನಯಾನ ಕುರಿತು ಹೊರತರಲಾದ `ಸವ್ಯಸಾಚಿ'''' ಕೃತಿ ಲೋಕಾರ್ಪಣೆ ಕಾರ್ಯಕ್ರಮ ಅಲ್ಲಿ ಸೇರಿದ್ದವರ ಎದೆಯಲ್ಲಿ ತುಂಬು ಕುಟುಂಬದ ಮಮತೆ ಅನುಭವಿಸುವಂತೆ ಮಾಡಿತು..
ಸಾಮಾನ್ಯವಾಗಿ ಅಗಲಿದ ತಂದೆಯನ್ನು ನೆನಪಿಸುವುದು ಅವರ ಶ್ರಾದ್ಧ, ಪುಣ್ಯತಿಥಿ ಕಾರ್ಯಕ್ರಮಗಳಲ್ಲಿ. ಆದರೆ ಪರ್ವತಿ ಕುಟುಂಬ ಸಾಹಿತ್ಯ, ರಂಗಭೂಮಿ, ಗೆಳೆಯರ ಬಳಗದಲ್ಲಿ ಶೀನೂಕಾಕಾ ಎಂದೇ ಹೆಸರಾಗಿದ್ದ ಡಾ. ಶ್ರೀನಿವಾಸರಾವ ಪರ್ವತಿ ಅವರನ್ನು ನೆನಪಿಸಿಕೊಳ್ಳಲಿಲ್ಲ, ಬದಲಾಗಿ ಅವರ ಬದುಕಿನ ನೆನಪುಗಳಿಗೆ ಅಕ್ಷರ ರೂಪ ನೀಡಿ, `ಸವ್ಯಸಾಚಿ'''' ಕೃತಿ ಮೂಲಕ ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿತು.ಈ ಕೃತಿಯಲ್ಲಿ ಮಕ್ಕಳು, ಮೊಮ್ಮಕ್ಕಳು ತಮ್ಮ ನೆನಪುಗಳಲ್ಲು ಹಂಚಿಕೊಂಡಿದ್ದಾರೆ. ಪ್ರಹ್ಲಾದ ಪರ್ವತಿ ಸಂಪಾದಿಸಿ ಈ ಕೃತಿಯನ್ನುಶೀನೂಕಾಕಾರ ಗಿರಿಮೊಮ್ಮಗ 10 ವರ್ಷದ ದರ್ಶ ತಲೆಯ ಮೇಲೆ ಹೊತ್ತು ವೇದಿಕೆಗೆ ತಂದಾಗ ಹಿರಿಯ ಸಾಹಿತಿಗಳಾದ ಡಾ. ರಮಾಕಾಂತ ಜೋಶಿ, ಶ್ರೀನಿವಾಸ ವಾಡಪ್ಪಿ, ಡಾ. ಕೃಷ್ಣ ಕಟ್ಟಿ, ಕನ್ನಡ ಹೋರಾಟಗಾರ ವೆಂಕಟೇಶ ಮರೇಗುದ್ದಿ, ರಂಗಕರ್ಮಿ ಅನಂತ ದೇಶಪಾಂಡೆ ಜತೆಗೂಡಿ ಲೋಕಾರ್ಪಣೆಗೊಳಿಸಿದಾಗ ಅಲ್ಲಿದ್ದವರಿಗೆ ಮನೆದೇವರ ತೇರನೆಳೆದ ಸಂಭ್ರಮ.
ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ, ಸ್ವತಂತ್ರ್ಯಪೂರ್ವದಲ್ಲಿ ಕೆಳಮಧ್ಯಮ ಬ್ರಾಹ್ಮಣ ಕುಟುಂಬದ ಪ್ರತೀಕದಂತಿದ್ದ ಶೀನೂಕಾಕಾ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕೊಟ್ಟರು. ಇಂಥ ತಂದೆ ಅಪರೂಪ, ಈ ವಿಷಯದಲ್ಲಿ ಪರ್ವತಿ ಕುಟುಂಬದವರು ಅದೃಷ್ಟವಂತರು ಎಂದು ಶ್ಲಾಘಿಸಿದರು.
ವೆಂಕಟೇಶ ಮರೆಗುದ್ದಿ, ಪ್ರಹ್ಲಾದ ಪರ್ವತಿ ಮತ್ತಿತರರು ತಮ್ಮ ನೆನಪುಗಳನ್ನು ಹಂಚಿಕೊಂಡರು. ಸುಶಿಲೇಂದ್ರ ಕುಂದರಗಿ ಕಾರ್ಯಕ್ರಮ ನಿರೂಪಿಸಿದರು. ರಂಗಕರ್ಮಿ ಅನಂತ ದೇಶಪಾಂಡೆ ವರಕವಿ ಬೇಂದ್ರೆ ಅವರನ್ನು ಅನುಕರಣೆ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಲಕ್ಷ್ಮೀ ಪರ್ವತೀಕರ್ ಸುಶ್ರಾವ್ಯವಾಗಿ ಭಕ್ತಿಗೀತೆ ಹಾಡಿದರು.