ಲೋಕ ಚುನಾವಣೆಯಲ್ಲಿ ಖೂಬಾಗೆ ಬಾಯ್‌ ಬಾಯ್‌ ಎನ್ನಿ!: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Apr 18, 2024 2:18 AM

ಸಾರಾಂಶ

ಕೇಂದ್ರ ಕಾಮಗಾರಿಗಳ ಗುತ್ತಿಗೆ ಕುಟುಂಬಸ್ಥರಿಗೇ ನೀಡಿ ಸ್ವಜನ ಪಕ್ಷಪಾತ. 26ರ ಯುವಕ ಸಾಗರ ಖಂಡ್ರೆ ಗೆಲ್ಲಿಸಿ ದೇಶದಲ್ಲಿ ಬೀದರ್‌ ಜಿಲ್ಲೆಯ ಕೀರ್ತಿ ಹೆಚ್ಚಿಸಿ. ಬಹಿರಂಗ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕೇಂದ್ರದ ಕಾಮಗಾರಿಗಳ ಗುತ್ತಿಗೆಗಳನ್ನು ಕುಟುಂಬಸ್ಥರಿಗೇ ನೀಡಿ ಸ್ವಜನ ಪಕ್ಷಪಾತ ಮಾಡುತ್ತಿರುವ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಈ ಚುನಾವಣೆಯಲ್ಲಿ ಬಾಯ್‌ ಬಾಯ್‌ ಎಂದು ಹೇಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜನರಿಗೆ ಕರೆ ನೀಡಿದರು.

ನಗರದ ಗಣೇಶ ಮೈದಾನದಲ್ಲಿ ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಗವಂತ ಖೂಬಾಗೆ ಇದು ಕೊನೆಯ ಚುನಾವಣೆ. ಖೂಬಾ ನಡುವಳಿಕೆ ಕಮಲ ಪಾಳಯದಲ್ಲಿ ಸಾಕಷ್ಟು ಭಿನ್ನಮತ ಹಾಗೂ ಅಸಮಾಧಾನ ಸೃಷ್ಟಿಸಿದೆ. ಹೀಗಾಗಿ ಲೋಕ ಚುನಾವಣೆಯಲ್ಲಿ ಸೋಲುವ ಇವರಿಗೆ ಮುಂಬರುವ ದಿನಗಳಲ್ಲಿ ಬಿಜೆಪಿ ಜಿಪಂ ಟಿಕೆಟ್‌ ಕೂಡ ನೀಡಲ್ಲ ಎಂದು ವ್ಯಂಗ್ಯವಾಡಿದರು.

ಖೂಬಾ ನಡುವಳಿಕೆಯಿಂದ ಸ್ವಪಕ್ಷದ ಶಾಸಕರೇ ಬೇಸತ್ತಿದ್ದಾರೆ. ಔರಾದ್‌ ಶಾಸಕ ಪ್ರಭು ಚವ್ಹಾಣ್‌ ಖೂಬಾ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ ಬಸವಕಲ್ಯಾಣ ಶಾಸಕ ಶರಣು ಸಲಗರ ಚಪ್ಪಲಿ ತೂರಿದ್ದಾರೆ. ಇಂತಹ ವ್ಯಕ್ತಿ ನಮಗೆ ಏಕೆ ಬೇಕು ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರನ್ನು ಪ್ರಶ್ನಿಸಿದರು.

ಯುವಕರಿಗೆ ಪ್ರೇರಣೆಯಾಗುತ್ತದೆ ಎಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷದ ನಾಯಕರು ಸಾಗರ ಖಂಡ್ರೆಗೆ ಟಿಕೆಟ್‌ ನೀಡಿದ್ದಾರೆ ಹೊರತು ಭೀಮಣ್ಣ ಖಂಡ್ರೆ ಮೊಮ್ಮಗ ಅಥವಾ ಈಶ್ವರ ಖಂಡ್ರೆ ಪುತ್ರ ಎಂದು ನೋಡಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಗರ ಖಂಡ್ರೆಗೆ ಗೆಲ್ಲಿಸಿದರೆ ದೇಶದಲ್ಲಿಯೇ ಅತೀ ಚಿಕ್ಕ ವಯಸ್ಸಿನ ಸಂಸದ ಎಂಬ ಕೀರ್ತಿ ಬೀದರ್‌ ಜಿಲ್ಲೆಯ ಹೆಸರನ್ನು ದೇಶದಲ್ಲಿ ವಿಜೃಂಭಿಸುವಂತೆ ಮಾಡಲಿದೆ ಎಂದರು.

26 ವಯಸ್ಸಿನಲ್ಲಿ ಎಂಪಿ ಯಾಕೆ ಆಗಬಾರದು:

ಪೌರಾಡಳಿತ ಸಚಿವ ರಹೀಮ್‌ ಖಾನ್‌ ಮಾತನಾಡಿ, ಸಾಗರ ಖಂಡ್ರೆ ಚಿಕ್ಕವರು ಎಂದು ವಿರೋಧ ಪಕ್ಷದವರು ಹೇಳುತ್ತಾರೆ. ಡಿಸಿ, ಎಸ್ಪಿ 25 ವರ್ಷಕ್ಕೆ ಆಗುತ್ತಾರೆಂದರೆ 26 ವಯಸ್ಸಿನಲ್ಲಿ ಸಂಸದ ಏಕೆ ಆಗಬಾರದು ಎಂದು ಪ್ರಶ್ನಿಸಿದರು.

ಸಾಗರ ಖಂಡ್ರೆ ಕುಟುಂಬ ರಾಜ್ಯದ ಏಕೀಕರಣಕ್ಕಾಗಿ ಹೋರಾಟ ಮಾಡಿದ್ದಿದೆ. ಸಾಗರ ಖಂಡ್ರೆ ಕಣದಲ್ಲಿರುವುದರಿಂದ ಬಿಜೆಪಿಯವರು ಹೆದರಿದ್ದಾರೆ. 10 ತಿಂಗಳ ಹಿಂದೆ ನಮ್ಮ ಗ್ಯಾರಂಟಿಗಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರು. ಆದರೆ ಗ್ಯಾರಂಟಿ ಲಾಭ ಪಡೆಯಲು ವಿರೋಧಿಗಳೇ ಎಲ್ಲಕ್ಕೂ ಮುಂದಾದರು ಎಂದರು.

ಏ.24ರಂದು ಬೀದರ್‌ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಪ್ರಚಾರಕ್ಕೆ ಬರಲಿದ್ದು ಅಂದು ಗಣೇಶ ಮೈದಾನದಲ್ಲಿ ನಡೆಯಲಿರುವ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಸಿಎಂ ಸಲಹೆಗಾರ ಬಿಆರ್‌ ಪಾಟೀಲ್‌, ಮಾಜಿ ಸಚಿವ ಪಿಜಿಆರ್‌ ಸಿಂಧಿಯಾ, ರಾಜಶೇಖರ ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್‌, ಅಲ್ಲಮಪ್ರಭು ಪಾಟೀಲ್‌, ಭೀಮರಾವ್‌ ಪಾಟೀಲ್, ಡಾ. ಚಂದ್ರಶೇಖರ ಪಾಟೀಲ್‌, ಅರವಿಂದಕುಮಾರ ಅರಳಿ, ವಿಜಯಸಿಂಗ್‌, ಜಗದೇವ ಗುತ್ತೆದಾರ, ಸುಭಾಷ ರಾಠೋಡ, ಮಾಲಾ ಬಿ. ನಾರಾಯಣರಾವ್‌, ರೇವು ನಾಯಕ ಬೆಳಮಗಿ, ಕೈಲಾಸ ಪಾಟೀಲ್‌, ಬಸವರಾಜ ಜಾಬಶೆಟ್ಟಿ, ಆನಂದ ದೇವಪ್ಪ, ದತ್ತಾತ್ರೆಯ ಮೂಲಗೆ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಇದ್ದರು.

Share this article