ಕನ್ನಡಪ್ರಭ ವಾರ್ತೆ ಶಹಾಪುರ ಬಾಲ್ಯವಿವಾಹ ತಡೆಗೆ ಪ್ರತಿ ವಿದ್ಯಾರ್ಥಿನಿಯೂ ಪಣತೊಡಬೇಕು. ಜೊತೆಗೆ ಪ್ರತಿಯೊಬ್ಬರೂ ಇದನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಹೇಳಬೇಕು ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ್ ಹೇಳಿದರು. ನಗರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಸರಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಣ ಇಲಾಖೆ ಶಹಾಪುರ ಸಹಯೋಗದಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ಸಮಾಜಕ್ಕೆ ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟಿದಾಗ ಮಾತ್ರ ಈ ಅನಿಷ್ಟ ಪದ್ಧತಿಯನ್ನು ಬೇರು ಸಮೇತ ಸಮಾಜದಿಂದ ಕಿತ್ತೊಗೆಯಲ್ಲೂ ಸಾಧ್ಯವೆಂದರು. ಸಂಪನ್ಮೂಲ ವ್ಯಕ್ತಿಗಳೂ ಆದ ಹಿರಿಯ ನ್ಯಾ. ಶ್ರೀನಿವಾಸರಾವ್ ಕುಲಕರ್ಣಿ ಮಾತನಾಡಿ, ಬಾಲ್ಯವಿವಾಹ ತಡೆಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಬಾಲ್ಯವಿವಾಹಕ್ಕೆ ಬಡತನ, ಅನಕ್ಷರತೆ, ಮೂಢನಂಬಿಕೆ ಸೇರಿದಂತೆ ಹಲವು ಕಾರಣ ನೀಡಬಹುದು. ಇದರಲ್ಲಿ ವರದಕ್ಷಿಣೆ ದೊಡ್ಡ ಸಮಸ್ಯೆಯಾಗಿದೆ ಎಂದರು. ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಯಲ್ಲಿ ಸರಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಬಾಲ್ಯ ವಿವಾಹ ತಡೆಗೆ ಜಾಗೃತಿ ಜಾಥಾ ನಡೆಸಲಾಯಿತು. ಪ್ರಧಾನ ನ್ಯಾಯಾಧೀಶರಾದ ಶೋಭಾ, ಹಿರಿಯ ವಕೀಲರಾದ ಬಸಮ್ಮ ರಾಂಪುರೆ, ಪ್ಯಾನಲ್ ವಕೀಲರಾದ ಆಯಷ್ ಪರ್ವಿನ್, ಉಪ ಪ್ರಾಚಾರ್ಯ ವೆಂಕೋಬ ಪಾಟೀಲ್, ಬಿ.ಆರ್.ಸಿ. ರೇಣುಕಾ ಪಾಟೀಲ್ ಮಾತನಾಡಿದರು. ವಕೀಲರ ಸಂಘದ ತಾಲೂಕಾಧ್ಯಕ್ಷ ಸಂತೋಷ್ ದೇಶಮುಖ್, ಸರಕಾರಿ ಸಹಾಯಕ ಅಭಿಯೋಜಕ ವೈ.ಬಿ. ದೇಸಾಯಿ, ವಕೀಲ ಭೀಮರಾಜ, ಕಾಡಯ್ಯ, ಈರಯ್ಯ ಸೇರಿ ಇತರರಿದ್ದರು. ವೆಂಕಟೇಶ್ ನಿರೂಪಿಸಿ, ವಂದಿಸಿದರು.