ಎಸ್ಸಿ ಒಳ ಮೀಸಲಿಗೆ 4 ಸಮುದಾಯ ಕಿಡಿ

KannadaprabhaNewsNetwork |  
Published : Sep 11, 2025, 01:00 AM ISTUpdated : Sep 11, 2025, 05:16 AM IST
ಲಂಬಾಣಿ ಪ್ರತಿಭಟನೆಯಲ್ಲಿ ವಿಜಯೇಂದ್ರ | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನದಾಸ್ ವರದಿ ಶಿಫಾರಸ್ಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಂಜಾರ, ಭೋವಿ, ಕೊರಚ ಹಾಗೂ ಕೊರವ ಸಮುದಾಯಗಳ ಮುಖಂಡರು ಬೃಹತ್‌ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

  ಬೆಂಗಳೂರು :  ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನದಾಸ್ ವರದಿ ಶಿಫಾರಸ್ಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಂಜಾರ, ಭೋವಿ, ಕೊರಚ ಹಾಗೂ ಕೊರವ ಸಮುದಾಯಗಳ ಮುಖಂಡರು ಬೃಹತ್‌ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಬಂಜಾರ, ಭೋವಿ, ಕೊರಚ, ಕೊರವ ಮೀಸಲಾತಿ ಒಕ್ಕೂಟ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಸಮುದಾಯಗಳಿಗೆ ಆಗಿರುವ ಅನ್ಯಾಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.5ರಷ್ಟು ಒಳಮೀಸಲಾತಿ ಕೊಡಬೇಕು. ನ್ಯಾ.ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಬಳಸಲಾದ ಸ್ಪೃಶ್ಯ, ಅಸ್ಪೃಶ್ಯ ಪದಗಳನ್ನು ಕೈ ಬಿಡಬೇಕು ಹಾಗೂ ವಾಸ್ತವ ದತ್ತಾಂಶಗಳ ಆಧಾರದಲ್ಲಿ ಮೀಸಲಾತಿಗೆ ಪ್ರಾತಿನಿಧ್ಯ ಬೇಕು ಎಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟರು. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾನ್ಯ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಎಷ್ಟು ದಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದೀರಿ ಎಂಬುದು ಮುಖ್ಯವಲ್ಲ. ಆ ಕುರ್ಚಿಯಲ್ಲಿ ಕೂತಾಗ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಟ್ಟಿದ್ದೀರಾ ಎಂಬುದು ಅತ್ಯಂತ ಮುಖ್ಯವಾದುದು ಎಂದರು.

ಮನೆ ಕಟ್ಟುವುದು ಕಷ್ಟ:

ಮುಖ್ಯಮಂತ್ರಿಗಳೇ, ಮನೆ ಮುರಿಯುವ ಕೆಲಸ ಮಾಡುವುದು ಸುಲಭ. ಮನೆ ಕಟ್ಟುವುದು ಅತ್ಯಂತ ಕಷ್ಟದ ಕೆಲಸ. ರಾಜ್ಯದ ಜನ ನಿಮಗೆ ಆಶೀರ್ವಾದ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಈ ರಾಜ್ಯದ ಎಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯಗಳು, ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುವ ಅಪೇಕ್ಷೆ ಜನರಲ್ಲಿತ್ತು. ಆದರೆ, ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ಶೋಷಿತರಿಗೆ ನ್ಯಾಯ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಸಮುದಾಯಗಳಿಗೆ ಅನ್ಯಾಯ ಆಗಬಾರದೆಂದು ಶೇ.4.5 ರಷ್ಟು ಮೀಸಲಾತಿ ನೀಡಿತ್ತು. ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡಲು ಶೇ.1 ಮೀಸಲು ಪ್ರತ್ಯೇಕವಾಗಿ ಇಡಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ ರಚಿಸಿದ್ದರು. ಅಲೆಮಾರಿ ಸಮುದಾಯ, ಕೊರಚ, ಕೊರಮ ಸೇರಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಹಿಂದೆ ಯಡಿಯೂರಪ್ಪ ಅವರು ನೋಡಿಕೊಂಡಿದ್ದರು ಎಂದು ವಿಜಯೇಂದ್ರ ಹೇಳಿದರು.

ಬೆನ್ನಿಗೆ ಚೂರಿ ಹಾಕಿದ್ದಾರೆ-ರಾಜೀವ್‌:

ಮಾಜಿ ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾತನಾಡಿ, ಇದು ಯಾವುದೇ ವ್ಯಕ್ತಿ ಇಲ್ಲವೇ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲ. ಈ ಸಮಾಜಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ.

ಈಗಾಗಲೇ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವರಿಕೆ ಮಾಡಿಕೊಟ್ಟಿದ್ದೇವೆ. ಶತಶತಮಾನಗಳಿಂದಲೂ ನಮ್ಮ ಸಮುದಾಯ ಅನ್ಯಾಯಕ್ಕೊಳಗಾಗಿದೆ. ಸಾಮಾಜಿಕ ನ್ಯಾಯ, ಸಂವಿಧಾನ ಎಂದು ಭಾಷಣ ಮಾಡುವವರೇ ನಮ್ಮ ಸಮುದಾಯದ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ಹಿಂದಿನ ಸರ್ಕಾರ ಈ ಸಮುದಾಯಗಳಿಗೆ ಶೇ.4.5 ರಷ್ಟು ಪ್ರತ್ಯೇಕ ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿತು. ಆದರೆ ಕಾಂಗ್ರೆಸ್ ಸರ್ಕಾರ ಮಾಜಿ ಸಚಿವ ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಶಿಫಾರಸ್ಸುಗಳನ್ನು ಕೈಬಿಟ್ಟು ಕೇವಲ ನಾಗಮೋಹನದಾಸ್ ಆಯೋಗದ ಶಿಫಾರಸ್ಸುಗಳನ್ನು ಸ್ವೀಕರಿಸಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರಶ್ನಿಸಿದರು.

ಕಡೇ ಪಕ್ಷ ನಾಗಮೋಹನದಾಸ್ ವರದಿಯ ಶಿಫಾರಸುಗಳನ್ನು ಕೂಡ ಪರಿಗಣನೆ ಮಾಡಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ತನ್ನದೇ ಆದ ನಿರ್ಧಾರ ತೆಗೆದುಕೊಂಡಿದೆ. ಇದರ ಪರಿಣಾಮ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ರಾಜೀವ್ ಎಚ್ಚರಿಸಿದರು.

ಈ ಸಂದರ್ಭ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಪ್ರಭು ಚೌಹಾಣ್, ಎಂ.ಚಂದ್ರಪ್ಪ, ಸುನಿಲ್ ವಲ್ಯಾಪುರೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕರಾದ ಪಿ. ರಾಜೀವ್, ದೇವನಹಳ್ಳಿ ಚಂದ್ರಪ್ಪ, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

ವಿಧಾನಸೌಧಕ್ಕೆ ಮುತ್ತಿಗೆ ಯತ್ನ

ಇದೇ ವೇಳೆ ಪ್ರತಿಭಟನಾ ನಿರತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವಿಫಲ ಯತ್ನ ನಡೆಸಿದರು. ಸ್ವಾತಂತ್ರ್ಯ ಉದ್ಯಾನವನದ ಹೊರಭಾಗದಲ್ಲಿ ಪ್ರತಿಭಟನಾನಿರತರು ಸರ್ಕಾರದ ಪ್ರತಿಕೃತಿ ದಹನ ಮಾಡಲು ಮುಂದಾದಾಗ ಪೋಲೀಸರು ತಡೆಯಲೆತ್ನಿಸಿದರು. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಲವರು ಬ್ಯಾರಿಕೇಡ್‌ಗಳನ್ನು ಏರಿ ದಾಟಲು ಪ್ರಯತ್ನಿಸಿದರು. ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರೆಸಿದರು. ಪರಿಣಾಮ ಮೆಜೆಸ್ಟಿಕ್ ಪ್ರದೇಶ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಯಿತು. ಕೊನೆಗೆ ಲಘು ಲಾಠಿ ಪ್ರಹಾರದ ಮೂಲಕ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದರು.

ಮನವಿ ಸ್ವೀಕರಿಸಿದ ರಾಮಲಿಂಗಾರೆಡ್ಡಿ

ತಮ್ಮ ಮನವಿ ಸ್ವೀಕರಿಸಲು ಖುದ್ದು ಮುಖ್ಯಮಂತ್ರಿಗಳೇ ಆಗಮಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆ

ಪ್ರತಿಭಟನೆ ವೇಳೆ ಮಹಿಳೆಯೊಬ್ಬರು ತಮ್ಮ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮ*ತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ತಕ್ಷಣ ಅಕ್ಕಪಕ್ಕದವರು ಪೆಟ್ರೋಲ್ ಬಾಟಲಿ ಕಸಿದುಕೊಂಡು ಅನಾಹುತ ತಪ್ಪಿಸಿದರು.

ಸರ್ಕಾರಕ್ಕೆ ಒಂದು ವಾರದ ಗಡುವು: ರಾಜೀವ್

ಪರಿಶಿಷ್ಟ ಜಾತಿಗಳ ಮೀಸಲಾತಿಯ ಸಂಬಂಧಿಸಿದ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದೆ ಎಂದು ಮಾಜಿ ಶಾಸಕ ಪಿ.ರಾಜೀವ್ ತಿಳಿಸಿದ್ದಾರೆ. ಪ್ರತಿಭಟನೆ ಮುಗಿದ ಬಳಿಕ ಮಾತನಾಡಿದ ಅವರು, ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಇಂದಿನದು ಕೇವಲ ಟ್ರೈಲರ್ ಮಾತ್ರ; ಪಿಕ್ಚರ್ ಅಭಿ ಬಾಕಿ ಹೈ. ಒಂದು ವಾರದ ಒಳಗೆ ಈ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡಲು ಗಡುವು ಹಾಕಿದ್ದೇವೆ. ಒಂದು ವೇಳೆ ಒಂದು ವಾರದ ಒಳಗೆ ಇವರು ತೀರ್ಮಾನ ತೆಗೆದುಕೊಳ್ಳದೇ ಇದ್ದರೆ ಇನ್ನಷ್ಟು ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬೇಡಿಕೆ ಏನು?

ಬಂಜಾರ, ಭೋವಿ, ಕೊರಚ ಕೊರವರಿಗೆ ಪ್ರತ್ಯೇಕ ಶೇ.5ರಷ್ಟು ಒಳಮೀಸಲು ನೀಡಬೇಕು 

ನ್ಯಾ.ದಾಸ್ ಆಯೋಗದ ವರದಿಯಲ್ಲಿ ಬಳಸಲಾದ ಸ್ಪೃಶ್ಯ, ಅಸ್ಪೃಶ್ಯ ಪದ ಕೈ ಬಿಡಬೇಕು

ವಾಸ್ತವ ದತ್ತಾಂಶ ಆಧಾರದಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪ್ರಾತಿನಿಧ್ಯತೆ ನೀಡಬೇಕು

PREV
Read more Articles on

Recommended Stories

ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ: ಮೊಯ್ಲಿ
ಮಾನವ ಸಂಬಂಧಗಳ ಪುನರ್‌ ನಿರ್ಮಾಣ ಬಹು ಮುಖ್ಯ: ಪ್ರೊ.ಸೌರವ್‌