ಎಸ್ಸಿ ಒಳಮೀಸಲಾತಿ ಸಮೀಕ್ಷೆಗೆ ಜಿಲ್ಲೆಯಲ್ಲಿ ಚಾಲನೆ

KannadaprabhaNewsNetwork | Published : May 6, 2025 12:16 AM

ಸಾರಾಂಶ

ಪರಿಶಿಷ್ಟ ಜಾತಿಯ 101 ಉಪ ಜಾತಿಗಳ ವಿವರವಾದ ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರಿಶಿಷ್ಟ ಜಾತಿ (ಎಸ್ಸಿ) ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಳಗಾವಿಯಲ್ಲಿ ಉತ್ತರ ಶಾಸಕ ಆಸೀಫ್ ಸೇಠ್‌, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಮೀಕ್ಷೆಗೆ ಚಾಲನೆ ನೀಡಿದರು.

ಬೆಳಗಾವಿ ಸದಾಶಿವನಗರದ ಪರಿಶಿಷ್ಟ ಜಾತಿ ಸಮುದಾಯದ ಮನೆಯೊಂದರಲ್ಲಿ ಸಮೀಕ್ಷೆ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಮಹಾನಗರ ಪಾಲಿಕೆ ಆಯುಕ್ತ ಶುಭ ಬಿ., ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ ಸೇರಿ ಮತ್ತಿತರರು ಇದ್ದರು.

ಸಮೀಕ್ಷೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಪರಿಶಿಷ್ಟ ಜಾತಿಯ 101 ಉಪ ಜಾತಿಗಳ ವಿವರವಾದ ಸಮೀಕ್ಷೆ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಆಯಾ ವಾರ್ಡ್ ಮತಗಟ್ಟೆ ಪಟ್ಟಿ ಆಧಾರವಾಗಿ ಇಟ್ಟುಕೊಂಡು ಅವರ ಕುಟುಂಬದವರ ಜೊತೆಗೆ ಮಾತನಾಡಿ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ.? ಎಲ್ಲರ ಹೆಸರು ಬರೆದಿಟ್ಟುಕೊಂಡು, ಸರ್ಟಿಫಿಕೇಟ್ ಆರ್.ಡಿ. ನಂಬರ್ ಅಪ್‌ಲೋಡ್ ಮಾಡುತ್ತೇವೆ. ಇದರಿಂದ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ. ಸರ್ಕಾರದಿಂದ ಸ್ಪಷ್ಟವಾದ ನಿರ್ದೇಶನವಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಿಬ್ಬಂದಿಗೆ ಸರ್ಕಾರ ಭತ್ಯೆ ನೀಡಲಿದೆ ಎಂದರು.

10 ಎಲುಮರೇಟರ್ ಮೇಲೆ ಒಬ್ಬ ಮೇಲ್ವಿಚಾರಕ ಇರುತ್ತಾರೆ. ಇವರು ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ. ಎಲುಮರೇಟ‌ ಕೆಲಸ ಬಹುಮುಖ್ಯ ಆಗಿರುತ್ತದೆ. ಅವರೇ ಪ್ರತಿ ಮನೆಗೂ ಹೋಗಿ ಶೀಟ್ ನೋಡಿಕೊಂಡು ಎಲ್ಲವನ್ನು ಪರಿಶೀಲಿಸಿ ಅಪ್ಲಿಕೇಶನ್ ನಲ್ಲಿ ಫೋಟೊ ಸಮೇತ ಅಪ್‌ಲೋಡ ಮಾಡುತ್ತಾರೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಥಳೀಯ ಬಿಎಲ್‌ಒ ಮೂಲಕ ಸ್ವೀಕೃತಿ ಪ್ರತಿ ತಲುಪಿಸಲಾಗುತ್ತದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಗಣತಿದಾರರಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಎಷ್ಟು ಪರಿಶಿಷ್ಟ ಜಾತಿ ಕುಟುಂಬಗಳಿವೆ. ಅದರಲ್ಲಿ ಎಷ್ಟು ಜನಸಂಖ್ಯೆ ಇದೆ ಎಂಬುದನ್ನು ದೃಢಪಡಿಸಲು ಈ ಸಮೀಕ್ಷೆ ನಡೆಯುತ್ತಿದೆ. ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಸಮೀಕ್ಷೆ ಇಂದಿನಿಂದ ಆರಂಭವಾಗಿದೆ. ಎಲುಮರೇಟರ್ಸ್ ಮತ್ತು ಸೂಪರಸರ್ಸ್ ಸೇರಿ ಒಟ್ಟು 4970 ಜನರನ್ನು ನೇಮಿಸಲಾಗಿದೆ. ಸರ್ಕಾರ ನಿಗದಿಪಡಿಸಿದಂತೆ ಈ ತಿಂಗಳ 20ರೊಳಗೆ ಸಮೀಕ್ಷೆ ಪೂರ್ಣಗೊಳಿಸುತ್ತೇವೆ ಎಂದರು.

ಮೊದಲ ಹಂತದಲ್ಲಿ ಮೇ 5ರಿಂದ ಮೇ 17ರವರೆಗೆ ಮನೆ ಮನೆ ಭೇಟಿ ಕೊಟ್ಟು ಸಮೀಕ್ಷೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಮೇ 19ರಿಂದ ಮೇ 21 ರವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಮೀಕ್ಷೆ ನಡೆಯುತ್ತದೆ. ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಸೇರಿಸಬಹುದು. ಮೂರನೇ ಹಂತದಲ್ಲಿ ಮೇ 19ರಿಂದ ಮೇ ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು. ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6.30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಎನಾಬಲ್ ಮಾಡಲಾಗಿರುತ್ತದೆ. ಹಾಗಾಗಿ, ತಾವು ಬೇರೆ ರಾಜ್ಯದಲ್ಲಿದ್ದರೂ ಆಪ್ ಮೂಲಕ ತಮ್ಮ ಹೆಸರು ಸೇರಿಸಬಹುದು. ಹಾಗಾಗಿ, ಪರಿಶಿಷ್ಟ ಜಾತಿ ಸಮುದಾಯದ ಯಾರೂ ಸಮೀಕ್ಷೆಯಿಂದ ತಪ್ಪಿಸಬಾರದು ಎಂದು ಅವರು ಮನವಿ ಮಾಡಿಕೊಂಡರು.ಪಾಲಿಕೆ ಸದಸ್ಯನ ವಿರುದ್ಧ ಶಾಸಕ ಸೇಠ್‌ ಗರಂ

ಎಸ್‌ಸಿ ಒಳ ಮೀಸಲಾತಿ ಸಮೀಕ್ಷೆ ವೇಳೆ ಅಧಿಕಾರಿಯೊಂದಿಗೆ ಏರುಧ್ವನಿಯಲ್ಲಿ ಮಾತನಾಡಿದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ ಜೀರಗ್ಯಾಳ ಅವರನ್ನು ಶಾಸಕ ಆಸೀಫ್‌ ಸೇಠ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸದಾಶಿವ ನಗರದ ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಸವಿತಾ ಕಾಂಬಳೆ ಅವರ ಮನೆಯಿಂದ ಸಮೀಕ್ಷೆ ಆರಂಭಿಸಲು ಯೋಜಿಸಲಾಗಿತ್ತು. ಅಲ್ಲಿ ಆಪ್ ಡೌನ್‌ಲೋಡ್ ಆಗಲಿಲ್ಲ. ಇದರಿಂದಾಗಿ ಜನ ಸಾಮಾನ್ಯರ ಮನೆಯಿಂದ ಚಾಲನೆ ನೀಡಲಾಯಿತು. ಆ ಸ್ಥಳಕ್ಕೆ ಬಂದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ ಜಿರಗ್ಯಾಳ ಅವರು ಪಾಲಿಕೆ ಉಪ ಆಯುಕ್ತರ ಜೊತೆಗೆ ವಾಗ್ವಾದ ನಡೆಸಿ ಇಲ್ಲಿ ಶಾಸಕರ ಮಾತು ಕೇಳಿ ರಾಜಕಾರಣ ಮಾಡ್ತಿದ್ದಾರಾ ಎಂದು ಅಧಿಕಾರಿಗೆ ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಆಶೀಫ್ ಸೇಠ್ ಅಧಿಕಾರಗಳ ಜೊತೆಗೆ ಏರುಧ್ವನಿಯಲ್ಲಿ ಮಾತನಾಡದಂತೆ ತರಾಟೆಗೆ ತೆಗೆದುಕೊಂಡರು.

Share this article