ಒತ್ತುವರಿ - ಕಂದಾಯ ಭೂಮಿ ಸಮಸ್ಯೆ ಬಗೆಹರಿಸಲು ಒತ್ತಾಯ । ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಮುಖಂಡರೊಂದಿಗೆ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಹಲವು ಸಮಸ್ಯೆಗಳು ಅನಾವರಣಗೊಂಡವು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಮುಖಂಡರು ಜನರ ಮೂಲಭೂತ ಸಮಸ್ಯೆಗಳು, ಕಂದಾಯ, ಒತ್ತುವರಿ ಭೂಮಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.ದಲಿತರಿಗೆ ಮಂಜೂರಾಗಿರುವ ಜಮೀನುಗಳಿಗೆ ಹಕ್ಕುಪತ್ರ , ಎನ್.ಆರ್.ಪುರ ಅಂಬೇಡ್ಕರ್ ಭವನಗಳಲ್ಲಿ ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯ ಗಳನ್ನು ಒದಗಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ನೋಂದಣಿ ಕೌಂಟರ್‌ಗಳನ್ನು ತೆರೆಯುವಂತೆ ಮುಖಂಡರು ಅಧಿಕಾರಿ ಗಳಿಗೆ ಮನವಿ ಮಾಡಿದರು.
ನ್ಯಾಯಾಲಯಗಳಲ್ಲಿ ಜಾಮೀನು ಸಲ್ಲಿಸುವ ಸಮಯದಲ್ಲಿ ಪರಭಾರೆ ನಿಷೇಧ ಪಹಣಿ ಸಲ್ಲಿಸಿದರೆ ನ್ಯಾಯಾಲಯ ಅದನ್ನು ಪರಿಗಣಿಸುವಂತೆ ಮನವಿ ಮಾಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮದ್ಯ ಮಾರಾಟದ ದೂರುಗಳ ವ್ಯಾಪಕವಾಗಿ ಕೇಳಿ ಬಂದ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಗೆ ಪೊಲೀಸ್ ಇಲಾಖೆಯಿಂದ ಪತ್ರ ಬರೆದ ಪರಿಣಾಮ 321 ಪ್ರಕರಣಗಳನ್ನು ದಾಖಲಿಸಿ, 328 ಮಂದಿಯನ್ನು ಬಂಧಿಸಿ ಒಂದು ಸಾವಿರ ಲೀಟರ್ ಗೂ ಹೆಚ್ಚು ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ರಶ್ಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಂಧ್ಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. 31 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಪಿ ಡಾ. ವಿಕ್ರಂ ಅಮಟೆ ಅಧ್ಯಕ್ಷತೆಯಲ್ಲಿ ಎಸ್ಸಿ.ಎಸ್ಟಿ. ಕುಂದುಕೊರತೆ ಸಭೆ ನಡೆಯಿತು. ಎಎಸ್‌ಪಿ ಕೃಷ್ಣಮೂರ್ತಿ, ಉಪ ವಿಭಾಗಾಧಿಕಾರಿ ರಶ್ಮಿ ಇದ್ದರು.