ಮಂಗಳೂರು: ಪರಿಶಿಷ್ಟ ಜಾತಿಗೆ ಮಾತ್ರವಲ್ಲ ಪರಿಶಿಷ್ಟ ಪಂಗಡಗಳಿಗೂ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ಅವಿಭಜಿತ ದ.ಕ. ಜಿಲ್ಲಾ ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಮಂಗಳೂರಿನ ಬಾಲಂಭಟ್ ಸಭಾಂಗಣದಲ್ಲಿ ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಪರಿಶಿಷ್ಟ ಪಂಗಡ ಜಾತಿಗಳ ಪ್ರಮುಖರ ಸಭೆ ನಡೆಸಿದ ಬಳಿಕ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ವಿಚಾರದಲ್ಲಿ 2024 ಆ.1 ರಂದು ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಪರಿಶಿಷ್ಟ ಜಾತಿಗಳಿಗೆ ಮಾತ್ರವಲ್ಲ, ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸಿಯೇ ಈ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳತ್ತ ಮಾತ್ರ ಗಮನ ಹರಿಸುತ್ತಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕದಲ್ಲಿ ಪ. ಪಂಗಡದಲ್ಲಿ ಒಟ್ಟು 50 ಜಾತಿಗಳಿವೆ. 2011ರ ಕೇಂದ್ರ ಸರ್ಕಾರದ ಜನಗಣತಿಯ ಪ್ರಕಾರ ಈ 50 ಜಾತಿಗಳ ಒಟ್ಟು ಜನಸಂಖ್ಯೆ 42.48 ಲಕ್ಷ. ಇದರಲ್ಲಿ ವಾಲ್ಮೀಕಿ ಸಮುದಾಯದವರು 32.96 ಲಕ್ಷದಷ್ಟಿದ್ದಾರೆ. ಉಳಿದ 49 ಜಾತಿಗಳಲ್ಲಿ 9.52 ಲಕ್ಷ ಜನಸಂಖ್ಯೆ ಇದೆ. ಆದಿಯನ್, ಬಾವ್ಚಾ, ಡುಂಗ್ರಿಗರಾಸಿಯಾ, ಚೆಂಚು, ಹಳಪಟ್ಟಿ, ಗೌಡ್ಲು, ಕಣಿಯನ್, ಮಲೆಕುಡಿಯ, ಮಲೇರು, ಪಣಿಯನ್ ಈ ಜಾತಿಗಳ ಜನಸಂಖ್ಯೆ 10 ಸಾವಿರವೂ ಇಲ್ಲ. ಕೆಲವು ಮೂರಂಕೆ ಜನಸಂಖ್ಯೆಯ ಜಾತಿಗಳೂ ಇವೆ. ಎಷ್ಟೋ ಜಾತಿಗಳಲ್ಲಿ ಸರ್ಕಾರಿ ನೌಕರಿ ಎಂಬುದು ಗಗನ ಕುಸುಮವೇ ಆಗಿದೆ. ಪ.ಪಂಗಡದಲ್ಲಿ ಪ್ರಬಲರಾಗಿರುವ ವಾಲ್ಮೀಕಿ ಸಮುದಾಯವೇ ಉಳಿದ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಾಗಿದೆ. ಪ.ಪಂಗಡಗಳ ನಡುವೆ ಒಳ ಮೀಸಲು ಹಂಚಿಕೆಯಾದರೆ ಸಣ್ಣ, ಅತೀ ಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.
ಮುಖಂಡರಾದ ಡಾ.ಸುಂದರ ನಾಯ್ಕ, ಕಾವೇರ, ಮುತ್ತಪ್ಪ, ಸುಂದರ ನಾಯ್ಕ, ಮುತ್ತಯ್ಯ, ವಕೀಲ ಪ್ರವೀಣ್ ಕುಮಾರ್ ಮತ್ತಿತರರಿದ್ದರು.ಪ್ರತ್ಯೇಕ ಆಯೋಗ ರಚನೆ ಬೇಡಿಕೆ