ಕನ್ನಡಪ್ರಭ ವಾರ್ತೆ ಬೇತಮಂಗಲಚೆನ್ನದಾಸರ್ ಸಮುದಾಯ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರ ಹಿಂದುಳಿದಿದೆ. ಸಮುದಾಯ ಪರವಾಗಿ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಹೇಳಿದರು.ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ಕೊಡಗೇನಹಳ್ಳಿಯಲ್ಲಿ ಚೆನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿ, ಅಲೆಮಾರಿಗಳಿಗೆ ಜಾತಿ ಪ್ರಮಾಣಪತ್ರ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಅವರ ವೃತ್ತಿ, ಆಚಾರ ವಿಚಾರ ಜೀವನ ಶೈಲಿ, ಧಾರ್ಮಿಕ ವೃತ್ತಿ, ಭಾಷೆಯನ್ನು ಮಾನದಂಡ ಮಾಡಿಕೊಂಡು ಜಾತಿ ಪ್ರಮಾಣ ಪತ್ರ ಕೊಡಲು ತಹಸೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದರು..
ಯಾರೋ ಒಬ್ಬರು ಸಮುದಾಯದ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದುಕೊಂಡು ದುರ್ಬಳಕೆ ಮಾಡಿಕೊಂಡಿರುವ ಫಲವಾಗಿ ಇವತ್ತಿನ ದಿನಗಳಲ್ಲಿ ಇಡೀ ಚನ್ನ ದಾಸರ್ ಜನಾಂಗವೇ ಶಿಕ್ಷಣ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ಐದು ಸಾವಿರ ಮನೆ ವಾಪಸ್
ರಾಜ್ಯ ಸರ್ಕಾರದಿಂದ ಅಲೆಮಾರಿ ಸಮುದಾಯಗಳಿಗೆ ಸೂರು ಕಲ್ಪಿಸುವ ದೃಷ್ಟಿಯಿಂದ ಸರ್ಕಾರದಿಂದ ಸುಮಾರು ೧೦ ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು, ಆದರೆ ಕೇವಲ ೫ ಸಾವಿರ ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ತಲುಪಿಸಲಾಯಿತು, ಉಳಿದ ೫ ಸಾವಿರ ಮನೆಗಳನ್ನು ಸರ್ಕಾರ ವಾಪಸ್ ಪಡೆಯಿತು ಎಂದು ಬೇಸರ ತೋಡಿಕೊಂಡರು. ರಾಜ್ಯದ ಪ್ರತಿ ಜಿಲ್ಲೆಯನ್ನು ವಾಸಿಸುವಂತಹ ಅಲೆಮಾರಿ ಜನಾಂಗದವರಿಗೆ ಆಧಾರ ಕಾರ್ಡ್ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದಾಗ, ಕಂದಾಯ ಸಚಿವ ಕೃಷ್ಣಭೈರೇಗೌಡರು ತಕ್ಷಣವೇ ಅಲೆಮಾರಿ ಜನಾಂಗದವರಿಗೆ ಆಧಾರ್ ಕಾರ್ಡ್ ಮಾಡಿಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಮಾಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸಬೇಕು.ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ಹಾಗೂ ಬಡ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸಾಲ ಸೌಲಭ್ಯ ಸದ್ಬಳಕೆಯಾಗಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಮಹಿಳಾ ಸಂಘದ ಸದಸ್ಯರಿಗೆ ತಲ ೫೦ ಸಾವಿರ ರೂಪಾಯಿಗಳನ್ನು ಸಾಲ ನೀಡಲಾಗುತ್ತದೆ ಮಹಿಳೆಯರು ಇದರ ಸದ್ಬಳಕೆಯ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ವಿದ್ಯಾವಂತರಾಗಿ ಮಾಡಬೇಕೆಂದು ತಿಳಿಸಿದರು. ರಾಜ್ಯ ಚೆನ್ನದಾಸರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಚಲಪತಿ, ತಹಶೀಲ್ದಾರ್ ಭರತ್, ಸಮಾಜ ಕಲ್ಯಾಣ ಇಲಾಖೆ ಶ್ರೀನಿವಾಸ್, ಅಂಜಲಿ, ನಿಗಮದ ಕಾರ್ಯದರ್ಶಿ ಆನಂದ್ ಏಕಲವ್ಯ, ಪಿಎಸೈ ಗುರುರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ಚಲಪತಿ, ಅನುಷ್ಠಾನ ಸಮಿತಿ ಸದಸ್ಯರಾದ ನಾರಾಯಣ, ಮೋಹನ್, ಶ್ರೀಪತಿ, ಕೆಜಿಎಫ್ ತಾಲೂಕು ಅಧ್ಯಕ್ಷ ನಕ್ಕನಹಳ್ಳಿ ಚಂದ್ರ, ಮುಖಂಡರಾದ ವೆಂಕಟರಾಮ್, ಕೆಂಚಪ್ಪ, ಮುರಳಿ ಮೋಹನ್, ಪಂಪಾಪತಿ, ಮೇಕಾನಿಕ್ ವೆಂಕಟೇಶ್, ನರ್ನಹಳ್ಳಿ ಲಕ್ಷ್ಮಪ್ಪ ಇದ್ದರು.