ಪರಿಶಿಷ್ಟ ಜಾತಿಯ ಜನರು ಸರ್ಕಾರದ ಸೌಲಭ್ಯಗಳಿಂದ ಯಾವುದೇ ರೀತಿಯಲ್ಲೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪರಿಶಿಷ್ಟ ಜಾತಿಯ ಜನರು ಸರ್ಕಾರದ ಸೌಲಭ್ಯಗಳಿಂದ ಯಾವುದೇ ರೀತಿಯಲ್ಲೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ್ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಆಯೋಗದ ನಿರ್ದೇಶನದಂತೆ ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೆ ಶೇ. 94 ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನೂ ಶೇ. 6 ರಷ್ಟು ಮಾತ್ರ ಬಾಕಿ ಇದೆ. ಮಳೆ ಹೆಚ್ಚಾಗಿರುವ ಕಾರಣದಿಂದ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ತರೀಕೆರೆ, ಕಳಸ, ಬಾಳೆಹೊನ್ನೂರು, ಚಿಕ್ಕಮಗಳೂರಿನಲ್ಲಿ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಮುಂದುವರಿದ ಭಾಗವಾಗಿ ನಡೆಯುತ್ತಿರುವ ಆನ್‌ಲೈನ್ ಸಮೀಕ್ಷೆಗೆ ನೆಟ್‌ವರ್ಕ್ ಸಮಸ್ಯೆಯಾಗುತ್ತಿರುವುದರಿಂದ ಸಮೀಕೆ ಕಾರ್ಯ ವಿಳಂಬವಾಗುತ್ತಿದೆ ಎಂದರು.
ಮಲೆನಾಡಿನ ಜನರಿಗೆ ಉಪ ಜಾತಿಯ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ತಾವುಗಳು ಉಪ ಜಾತಿಗಳ ಬಗ್ಗೆ ಮಾಹಿತಿ ಸರಿಯಾಗಿ ನೀಡಿ ಸಹಕರಿಸುವಂತೆ ತಿಳಿಸಿದ ಅವರು, ಉಪ ಜಾತಿಗಳ ಉಲ್ಲೇಖ ಸಮಸ್ಯೆಯಿಂದ ಸಮೀಕ್ಷೆಗೆ ತೊಡಕಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಸಮುದಾಯದ ಮುಖಂಡರು ಹಳ್ಳಿಗಳಲ್ಲಿ ಸಮೀಕ್ಷೆಯಾಗದಿರುವ ಮನೆಗಳನ್ನು ಗಮನಿಸಿ ಸಮೀಕ್ಷೆ ಮಾಡಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು. ಮನೆ ಮಂದಿ ಇಲ್ಲದಿರುವ ಸಂದರ್ಭದಲ್ಲಿ ಅಕ್ಕ ಪಕ್ಕದವರು ಆ ಕುಟುಂಬದ ಜಾತಿ ಹಾಗೂ ಮೊಬೈಲ್ ಸಂಖ್ಯೆ ಮತ್ತಿತರೆ ಮಾಹಿತಿಯನ್ನು ಕೊಟ್ಟು ಸ್ಥಳೀಯರು ಸಹಕರಿಸುವಂತೆ ತಿಳಿಸಿದರು.
ಸಮೀಕ್ಷೆಗೆ ಎಲ್ಲ ಮುಖಂಡರ ಸಹಕಾರ ಅಗತ್ಯವಾಗಿದ್ದು, ಎಲ್ಲರೂ ಸಹಕರಿಸಿದಲ್ಲಿ ಈ ಸಮೀಕ್ಷೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬಹುದು ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುವುದು ಇದರ ಉದ್ದೇಶವಾಗಿದೆ. ಪರಿಶಿಷ್ಟ ಜಾತಿಯವರು ಉಪ ಜಾತಿಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಆನ್ ಲೈನ್‌ನಲ್ಲಿ ಜಾತಿ, ಉಪ ಜಾತಿಯ ಸಮೀಕ್ಷೆಗೆ ಆಧಾರ್ ಕಾರ್ಡ್ ಮಾಹಿತಿ ಕೇಳಲಾಗುತ್ತಿದೆ. ಆಧಾರ್ ಕಾರ್ಡ್‌ಗೂ, ಜಾತಿಗೂ ಸಂಬಂಧ ಇರುವುದಿಲ್ಲ, ಆನ್ ಲೈನ್ ಮಾಡಲು ತೊಂದರೆಯಾಗುತ್ತಿದೆ ಎಂದರು.
ಸಭೆಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಆರ್.ದೇವರಾಜ್, ತರೀಕೆರೆ ಉಪವಿಭಾಗಾಧಿಕಾರಿ ಡಾ. ಕಾಂತರಾಜ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.-------
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.