ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮಹಿಳೆಯರು ಸಮಾಜದ ಮೂಚೂಣಿಗೆ ಬಂದು ಆರ್ಥಿಕ ಸಬಲರಾಗಲು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರು ತಮ್ಮ ಸಂಸ್ಥೆಗಳ ಮೂಲಕ ಬದುಕಿನ ನೆಮ್ಮದಿಗೆ ಹಲವಾರು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಎಫ್. ಪ್ರಭಾವತಿ ಹೇಳಿದರು.ಪಟ್ಟಣದ ಇಂಚಲ ಕ್ರಾಸ್ ಹತ್ತಿರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ತಾಲೂಕು ಯೋಜನಾ ಕಚೇರಿ, ಮಹಿಳಾ ಜ್ಞಾನ ವಿಕಾಸ, ಪ್ರಗತಿ ಬಂಧು ಸ್ವ-ಸಹಾಯ ಸಂಘ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುಟುಂಬದಲ್ಲಿ ಶಾಂತಿ, ನೆಮ್ಮದಿ ಕಾಣಬೇಕಾದರೆ ಸಹಕಾರ ಮನೋಭಾವ ಅಗತ್ಯ. ಪುರುಷನ ಸಾಧನೆಯ ಹಿಂದೆ ಮಹಿಳೆಯ ಸ್ಫೂರ್ತಿಯಿರುವಂತೆ, ಮಹಿಳೆಯರು ಸಾಧನೆಗೆಲು ಪುರುಷ ಸಮಾಜವನ್ನು ಪುರಸ್ಕರಿಸಬೇಕು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸಂಸ್ಥೆಗಳ ಬಗ್ಗೆ ಗೌರವ ಮೂಡಿಸಿಕೊಳ್ಳಬೇಕು ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟನ ಧಾರವಾಡ ಕಚೇರಿಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ. ಸುಮಾರು 40 ವರ್ಷಗಳಿಂದ ರಾಜ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಅನೇಕ ಕಾರ್ಯಕ್ರಮ ಅನುಷ್ಠಾನಗೊಳಿಸಿ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ರೂಪಿಸುತ್ತಿದೆ. ಸಂಸ್ಥೆಯು ಲಾಭದ ಉದ್ದೇಶಕ್ಕಾಗಿ ಸ್ಥಾಪನೆಯಾಗದೇ ಸಮುದಾಯದ ಏಳ್ಗೆಗಾಗಿ ಪ್ರಯತ್ನಿಸುತ್ತಿದೆ. ಹೀಗಾಗಿ ಯೋಜನೆಗಳ ಸಾರ್ಥಕತೆಗೆ ಪ್ರತಿಯೊಬ್ಬರ ಪ್ರೋತ್ಸಾಹ ಅತ್ಯಗತ್ಯ ಎಂದರು. ಕಿತ್ತೂರು ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಸವದತ್ತಿಯ ಲಕ್ಷ್ಮೀ ಅರಬೆಂಚಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಹಿಳೆಯರ ಜೀವನ ಕ್ರಮ, ಜಾನಪದ ವೈಶಿಷ್ಟ್ಯ, ಸಮಾಜಕ್ಕೆ ಮಹಿಳೆಯರ ಕೊಡುಗೆ, ಮಹಿಳೆಯರು ಪ್ರಸ್ತುತ ಅನುಭವಿಸುತ್ತಿರುವ ಸಂಕೋಲೆಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಿರಿಜಾ ಮಹಾಂತೇಶ ಕೌಜಲಗಿ, ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ, ಜನಜಾಗೃತಿ ವೇದಿಕೆ ಜಿಲ್ಲಾ ನಿರ್ಧೇಶಕ ವಿಠ್ಠಲ ಪಿಸೆ, ತಾಲೂಕು ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕನ್ನವರ, ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಮಲ್ಲಿಕಾ, ತಾಲೂಕು ಯೋಜನಾಧಿಕಾರಿ ಎಂ.ವಿಜಯಕುಮಾರ ಇತರರು ಇದ್ದರು.
ತಾಲೂಕು ಯೋಜನಾಧಿಕಾರಿ ಎಂ.ವಿಜಯಕುಮಾರ ಸ್ವಾಗತಿಸಿದರು. ವಲಯ ಮೇಲ್ವಚಾರಕ ಗಣಪತಿ ನಿರೂಪಿಸಿದರು. ಪರಶುರಾಮ ಕೆ. ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಹೊಲಿಗೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಪ್ರತಿನಿಧಿಗಳು, ಸೇವಾ ಪ್ರತಿನಿಧಿಗಳು, ಸದಸ್ಯರು ಪಾಲ್ಗೊಂಡಿದ್ದರು.