ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಚಾಮರಾಜನಗರದಲ್ಲಿ ಶಾಖಾ ಕಚೇರಿ ಹೊಂದಿರುವ ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ಸಂಸ್ಥೆಯಲ್ಲಿ ಸದಸ್ಯರಾಗಿರುವ ತಲಾ 8 ಪೋಷಕರ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೀಡಲಾಗುವ ವಿದ್ಯಾರ್ಥಿ ವೇತನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಮುಂದಿನ ಹಂತದ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಮಕ್ಕಳನ್ನು ವಿಚಾರಿಸಿದರು. ಭವಿಷ್ಯದಲ್ಲಿ ಏನು ಆಗಬೇಕೆಂಬ ಉದ್ದೇಶ ಹಾಗೂ ಗುರಿಗಳನ್ನು ಹೊಂದಿದ್ದೀರಿ ಎಂದು ಮಕ್ಕಳನ್ನು ಕೇಳಿದರು. ಇದಕ್ಕುತ್ತರಿಸಿದ ಮಕ್ಕಳು, ಉನ್ನತ ವಿದ್ಯಾಭ್ಯಾಸ ಪಡೆಯಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.ಬಳಿಕ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು, ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ವತಿಯಿಂದ ಸಂಸ್ಥೆಯಲ್ಲಿ ಸದಸ್ಯರಾಗಿರುವ ಪೋಷಕರ ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.
ಅಪೂರ್ವ (ಶೇ. 98.56), ಸಿಂಚನಾ (ಶೇ. 94.88), ತೇಜಸ್ವಿನಿ (ಶೇ. 94.24), ಅರ್ಪಿತಾ (ಶೇ. 94), ಮಾನಸ (ಶೇ. 93.44), ಇಂದುಶ್ರೀ (ಶೇ. 91), ಆಶಾ (ಶೇ. 90.56) ಹಾಗೂ ಹೇಮಲತಾ (ಶೇ. 89.28) ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಇದಕ್ಕೂ ಮೊದಲು ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ಸಂಸ್ಥೆಯ ವತಿಯಿಂದ ಜಿಲ್ಲಾಡಳಿತ ಭವನ ಆವರಣದಲ್ಲಿ ಗಿಡನೆಟ್ಟು ನಿರೇರೆಯಲಾಯಿತು.