ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ 3 ಶಾಲೆಗಳಿಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಬೈಂದೂರು ತಾಲೂಕಿನ ಯೋಜನಾ ನಗದ ನಿವಾಸಿ ಅರ್ಷಿತ್ ಅವಿನಾಶ್ ದೋಡ್ರೆ (24) ಎಂದು ಗುರುತಿಸಲಾಗಿದೆ. ಈತನ ಮೇಲೆ ಕಾರ್ಕಳ ತಾಲೂಕಿನಲ್ಲಿ 3 ಶಾಲೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಉಡುಪಿ ಜಿಲ್ಲೆ ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲಿಯೂ ಶಾಲಾ ಕಾಲೇಜುಗಳಲ್ಲಿ ಕಳ್ಳತನಗಳ ಆರೋಪ ಇದೆ.ಈತ ಫೆ.21ರ ರಾತ್ರಿ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ ಕಛೇರಿಯ ಬೀಗ ಒಡೆದು ಒಳಪ್ರವೇಶಿಸಿ 1,50,000 ರು. ನಗದು ಮತ್ತು ಮತ್ತು ಸಿಸಿಟಿವಿಯ 3 ಡಿವಿಆರ್‌ಗಳನ್ನು ಕಳವು ಮಾಡಿ, ಸಿಸಿ ಟಿವಿ ಹಾಳು ಮಾಡಿ ಹೋಗಿದ್ದ.
ಮಾ. 4 ರಾತ್ರಿ ಇಲ್ಲಿನ ಹಿರ್ಗಾನ ಗ್ರಾಮದ ಸಂತ ಮರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಕಚೇರಿ ಹಾಗೂ ಕಪಾಟಿನ ಬೀಗವನ್ನು ಮುರಿದು ಅದರಲ್ಲಿದ್ದ 60 ಸಾವಿರು ರು. ನಗದು ಮತ್ತು 5000 ರು. ಮೌಲ್ಯದ ಡಿವಿಆರ್ ಕಳವು ಮಾಡಿದ್ದ.ಮಾ. 6ರಂದು ರಾತ್ರಿ ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿ ಬೀಗ ಮುರಿದು, ಒಳಪ್ರವೇಶಿಸಿ ಹಣಕ್ಕಾಗಿ ಕಪಾಟಿನಲ್ಲಿ ಜಾಲಾಡಿ, ಅದರಲ್ಲಿದ್ದ ರಿಜಿಸ್ಟರ್‌ಗಳನ್ನು ಚಲ್ಲಾಪಿಲ್ಲಿ ಮಾಡಿದ್ದ. ಶಾಲೆಯಲ್ಲಿ ಹಣ ಇಲ್ಲದಿದ್ದರಿಂದ ಬರಿಗೈಯಲ್ಲಿ ತೆರಳಿದ್ದ.
ಈ ಎಲ್ಲಾ ಪ್ರಕರಣಗಳ ಬಗ್ಗೆ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರ ನೇತೃತ್ವದಲ್ಲಿ ಪೊಲೀಸ್ ತಂಡವು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಪ್ರೌಢಶಾಲೆ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಬಿಳಿ ಬಣ್ಣದ ಕಾರಿನಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತನೇ ಈ 3 ಶಾಲೆಗಳಲ್ಲಿ ಕಳ್ಳತನ ನಡೆಸಿದ್ದನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ಕಾರು, ಮೊಬೈಲ್ ಫೋನ್ ಮತ್ತು 84,500 ರು. ನಗದನ್ನು ವಶಕ್ಕೆ ಪಡೆಯಲಾಗಿದೆ. ಆತನಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.