- ಕಾಮಗಾರಿ ಆದೇಶವಿಲ್ಲದೇ ಶಿಥಿಲ ಕಟ್ಟಡ ತೆರವು ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ । ಸರ್ಕಾರ ಕಾಲೇಜು ಕಟ್ಟಡ ನಿರ್ಮಿಸಲು ಒತ್ತಾಯ
ಪಟ್ಟಣದ ಪುರಸಭೆ ಎದುರು ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಶಿಥಿಲ ಕಟ್ಟಡ ತೆರವು ಕಾರ್ಯಾಚರಣೆ ಖಂಡಿಸಿ ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಪುರಸಭೆ ಅಧಿಕಾರಿಗಳು ಜೆಸಿಬಿಯಿಂದ ಶಾಲೆ ಕಟ್ಟಡವನ್ನು ತೆರವುಗೊಳಿಸುತ್ತಿದ್ದರು. ಶಾಲೆಯ ಹೆಂಚುಗಳನ್ನು ತೆಗೆದು, ಗೋಡೆಗಳನ್ನು ಜೆಸಿಬಿ ಸಹಾಯದಿಂದ ನೆಲಸಮ ಮಾಡುತ್ತಿದ್ದರು. ಕಾಂಪೌಂಡ್ ಪಕ್ಕದಲ್ಲಿನ ಶೆಡ್‌ಗಳನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗಿತ್ತು. ಈ ವೇಳೆ ಹಳೇ ವಿದ್ಯಾರ್ಥಿಗಳು, ಸ್ಥಳೀಯರು ಕಾರ್ಯಾಚರಣೆಯನ್ನು ಖಂಡಿಸಿದರು.ಶಾಸಕ ಹರೀಶ್ ತರಾಟೆ:
ಶಾಲೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಸರಿಯಲ್ಲ. ಶಾಲೆ ಪಕ್ಕದಲ್ಲೇ ಬಾರ್ ಸಹ ಇದೆ. ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇಂಥ ಘಟನೆಗಳಿಂದ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಶಾಸಕರಾದ ನಮ್ಮ ಗಮನಕ್ಕೂ ತಾರದೇ ಕಾಮಗಾರಿ ಆದೇಶವೂ ಇಲ್ಲದೇ ಶಾಲೆ ಕಟ್ಟಡ ತೆರವು ಕಾರ್ಯ ಕೈಗೊಂಡಿರುವುದು ಅಕ್ಷಮ್ಯ ಎಂದು ಬಿ.ಪಿ.ಹರೀಶ್ ಕಿಡಿಕಾರಿದರು.
ಇಂದಿರಾ ಕ್ಯಾಂಟೀನ್ ತೆರೆಯಲು ಶಾಲೆ ಕಟ್ಟಡ ಕೆಡವಿದ ವಿಷಯ ಹರಡುತ್ತಿದ್ದಂತೆ ಎಸ್‌ಡಿಎಂಸಿ ಪದಾಧಿಕಾರಿಗಳು, ನಾಗರಿಕರು, ಶಾಲೆಯ ಹಳೇ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದರು. ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆ ಸಮೀಪದಲ್ಲಿ ಮದ್ಯದ ಅಂಗಡಿಗಳಿವೆ. ಹೀಗಿರುವಾಗ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದಲ್ಲಿ ಮದ್ಯಪಾನಿಗಳು ಹೆಚ್ಚಾಗುತ್ತಾರೆ. ಅವರು ಕ್ಯಾಂಟೀನ್‌ಗೆ ಆಗಮಿಸಿದಾಗ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಾಲಾ ಕಟ್ಟಡಗಳು ಶೈಕ್ಷಣಿಕ ಉದ್ದೇಶಗಳಿಗೆ ಮೀಸಲಾಗಿರಲಿ. ಅದೇ ಕಟ್ಟಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಿಸಬೇಕು. ಯಾರನ್ನೋ ಮೆಚ್ಚಿಸಲು ರುಚಿಯಿಲ್ಲದ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಶಾಲಾ ಕಟ್ಟಡವನ್ನೇ ತೆರವುಗೊಳಿಸುವ ಜಿಲ್ಲಾಧಿಕಾರಿ ವರ್ತನೆ ಖಂಡನೀಯ ಎಂದರು.
ಈ ಸಂದರ್ಭ ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಶಾಲಾ ಕಟ್ಟಡಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರದಿಯಂತೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಟ್ಟಡ ತೆರವುಗೊಳಿಸುತ್ತಿದ್ದೇವೆ. ಕಾಮಗಾರಿ ಆದೇಶದ ಫೈಲ್ ಗುಮಾಸ್ತರು ರಜಾ ಇರುವ ಕಾರಣ ಲಭ್ಯವಿಲ್ಲ ಎಂದರು.
- - -
- ಸುರೇಶ್ ಶಾಸ್ತ್ರಿ, ನಾಗರೀಕ
-ಚಿತ್ರ೨: ಕಟ್ಟಡ ತೆರವುಗೊಳಿಸಿದ ಸ್ಥಲವನ್ನು ಶಾಸಕ ಹರೀಶ್ ಪರಿಶೀಲಿಸಿದರು.
-ಚಿತ್ರ೩: ಶಾಲೆಯ ಹಳೇ ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದರು.