ಸಂತ ಸೇವಾಲಾಲ್ ಜಯಂತ್ಯುತ್ಸವ । ಹೆಚ್ಚು ಅಂಕ ಪಡೆದ ಮಕ್ಕಳಿಗೆ ಗೌರವ
ಕನ್ನಡಪ್ರಭ ವಾರ್ತೆ ಆನವಟ್ಟಿಒಳ್ಳೆಯ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲೆ, ಅವರನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆಲವು ಶಾಲೆಗಳಲ್ಲಿ ಕಟ್ಟಡಗಳ ಸಮಸ್ಯೆ ಇದೆ. ಅವುಗಳನ್ನು ಹಂತ ಹಂತವಾಗಿ ನಿರ್ಮಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು.
ಕೋಟಿಪುರ ತಾಂಡದಲ್ಲಿ ತಾಲೂಕು ಬಂಜಾರ ಸಂಘ, ತಾಂಡಾ ಅಭಿವೃದ್ಧಿ ನಿಗಮ ಜಂಟಿಯಾಗಿ ಹಮ್ಮಿಕೊಂಡಿದ್ದ 286ನೇ ಸಂತ ಸೇವಾಲಾಲ್ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲೇ, ಅವರನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೆಲವು ಶಾಲೆಗಳಲ್ಲಿ ಕಟ್ಟಡಗಳ ಸಮಸ್ಯೆ ಇದೆ. ಅವುಗಳನ್ನು ಹಂತ ಹಂತವಾಗಿ ನಿರ್ಮಿಸುತ್ತೇವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.ತಾಂಡಾ ಮುಖಂಡರು ನನ್ನ ಗಮನಕ್ಕೆ ಹಕ್ಕುಪತ್ರ ನೀಡಿರುವ ಜಮೀನುಗಳಿಗೆ ಅಧಿಕಾರಿಗಳು ನೋಟಿಸ್ ನೀಡಿರುವುದನ್ನು ಗಮನಕ್ಕೆ ತಂದಿದ್ದಾರೆ. ಇಂದು ಹಿಂದಿನ ಸರ್ಕಾರ ಹಾಗೂ ಅಧಿಕಾರಿಗಳು ಏನು ನಿರ್ಧಾರ ಮಾಡಿದ್ದರು ಎಂಬುದು ನಮಗೆ ಗೊತ್ತಿಲ್ಲ. ಏ.25ರಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಹಕ್ಕುಪತ್ರ ನೀಡಿರುವವರಿಂದ ಹಿಂಪಡೆಯುವ ಮಾತೇ ಇಲ್ಲ. ಕಾನೂನಾತ್ಮಕ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಜೊತೆಗೆ ರಕ್ಷಣೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ವಿಶೇಷವಾಗಿ ನನ್ನ ತಂದೆ ಬಂಗಾರಪ್ಪ ಬಂಜಾರ ಸಮುದಾಯದ ಉಡುಗೆ-ತೊಡುಗೆ ಇಷ್ಟಪಡುತ್ತಿದ್ದರು. ನನಗೂ ಇವರ ಉಡುಗೆ ತೊಡುಗೆ ಇಷ್ಟವಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಬಂಜಾರ ಉಡುಪು ಧರಿಸಿಕೊಂಡೆ ಮಾತನಾಡಿದರು.ಎಸ್.ಬಂಗಾರಪ್ಪ ಬಂಜಾರ ಸಮಾಜಕ್ಕೆ ಮಾಡಿರುವ ಸೇವೆಗಳನ್ನು ವಿಶ್ರಾಂತ ಪ್ರಾಧ್ಯಾಪಕ ಡಾ.ಸಣ್ಣರಾಮಪ್ಪ, ರಂಗ ನಿರ್ದೇಶಕ ಕೊಟ್ರಪ್ಪ ಜಿ ಹಿರೇಮಾಗಡಿ, ನಿವೃತ್ತ ಮುಖ್ಯ ಶಿಕ್ಷಕ ಸೋಮ್ಯಾನಾಯ್ಕ ಸ್ಮರಿಸಿದರು.
ಆನವಟ್ಟಿಯ ಕೆಪಿಎಸ್ ಶಾಲೆಯಿಂದ, ಕೋಟಿಪುರದ ಸೇವಾಲಾಲ್ ದೇವಸ್ಥಾನದವರೆಗೆ ಸಂತ ಸೇವಾಲಾಲ್ ಭಾವಚಿತ್ರದೊಂದಿಗೆ, ಮಹಿಳೆಯರು ಬಂಜಾರ ಸಂಪ್ರದಾಯಕ ಉಡುಗೆ ತೊಟ್ಟು ನೃತ್ಯ ಮಾಡಿದರು.2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಲೂರು ಮರಿಯಮ್ಮ ಮಠದ ಸದ್ಗುರು ಸೈನಾಭಗತ್ ಅವರು ಬೋಗ್ ಕಾರ್ಯಕ್ರಮ ನೆರವೇರಿಸಿ, ಆಶೀರ್ವಚನ ನೀಡಿದರು.ತಾಲೂಕು ಬಂಜಾರ ಸಂಘದ ಅಧ್ಯಕ್ಷ ಯಂಕ್ಯಾನಾಯ್ಕ, ಉಪಾಧ್ಯಕ್ಷ ಎಸ್.ಎಲ್ ಚನ್ನಾನಾಯ್ಕ, ಕಾರ್ಯದರ್ಶಿ ಟಿ. ವೆಂಕಟೇಶ್ ನಾಯ್ಕ, ಸಹ ಕಾರ್ಯದರ್ಶಿ ಡಾಕ್ಯಾನಾಯ್ಕ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ ರುದ್ರಗೌಡ, ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ ಶ್ರೀನಿವಾಸ, ಮುಖಂಡರಾದ ಮಧುಕೇಶ್ವರ ಪಾಟೀಲ್, ಮಂಜಣ್ಣ ನೇರಲಗಿ. ಅಂಜಲಿ ಸಂಜೀವ ಇದ್ದರು. ಶಿಕ್ಷಕ ಎಸ್.ಚಂದ್ಯಾನಾಯ್ಕ ಗಣ್ಯರನ್ನು ಸ್ವಾಗತಿಸಿದರು.