ಹೆಬ್ರಿ: ಕ್ರೈಸ್ತರು ಜೀವನದಲ್ಲಿ ಪ್ರಾರ್ಥನೆಯನ್ನು ಎಂದಿಗೂ ಮರೆಯಬಾರದು. ಪ್ರಾರ್ಥನೆಯೆಂದರೆ ದೇವರೊಂದಿಗೆ ಮಾತನಾಡುವುದು. ಪೋಷಕರು ಮಕ್ಕಳಿಗೆ ಯೇಸು ಕ್ರಿಸ್ತನ ಜೀವನ ಮತ್ತು ದೇವರ ವಾಕ್ಯಗಳ ಮಹತ್ವವನ್ನು ತಿಳಿಸಿಕೊಟ್ಟು ಬೆಳೆಸಬೇಕು. ಆಗ ಮಾತ್ರ ಮಕ್ಕಳು ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಯೇಸುವಿನೊಂದಿಗೆ ನಡೆಯಲು ಸಾಧ್ಯ ಎಂದು ಸಿಎಸ್ಐ ಕೆ.ಎಸ್.ಡಿ. ಭಾನುವಾರ ಶಾಲಾ ಸಂಚಾಲಕ ರೆ.ವೆ. ಸ್ಯಾಮುವೆಲ್ ಮನೋಜ್ ಕುಮಾರ್ ಹೇಳಿದರು.ಅವರು ಹೆಬ್ರಿಯ ಸಿಎಸ್ಐ ಇಮ್ಮಾನುವೇಲ್ ದೇವಾಲಯದ ಆತಿಥ್ಯದಲ್ಲಿ ಸಿಎಸ್ಐ ಕೆ.ಎಸ್.ಡಿ. ಉಡುಪಿ ಪ್ರಾದೇಶಿಕ ಪರಿಷತ್ತಿನ ವತಿಯಿಂದ ನಡೆದ ಜಾಗತಿಕ ಭಾನುವಾರ ಶಾಲಾ ದಿನಾಚರಣೆಯ ‘ಯೇಸುವಿನೊಂದಿಗೆ ನಡೆಯೋಣ’ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಸಂದೇಶ ನೀಡಿದರು.ಜಾಗತಿಕ ಭಾನುವಾರ ಶಾಲಾ ದಿನಾಚರಣೆಗೆ 246 ವರ್ಷಗಳ ಐತಿಹಾಸಿಕ ಹಿನ್ನೆಲೆಯಿದ್ದು, ಭಾರತದಲ್ಲಿ 150 ವರ್ಷಗಳ ಇತಿಹಾಸವಿದೆ. ಮಕ್ಕಳನ್ನು ಭಾನುವಾರ ಶಾಲೆಯ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ದೇವರ ವಾಕ್ಯದಂತೆ ಬೆಳೆಸಲು ಸಾಧ್ಯ. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯೊಂದಿಗೆ ನೀತಿವಂತರಾಗಿ ಬದುಕುವುದು ಮುಖ್ಯ. ಭಾನುವಾರ ಶಾಲಾ ಕಾರ್ಯಕ್ರಮದಲ್ಲಿ ಬಹುಮಾನ ಗೆಲ್ಲುವುದಕ್ಕಿಂತ ಆತ್ಮವನ್ನು ಗೆಲ್ಲುವುದು ಮುಖ್ಯ. ದೇವರು ನೀಡಿದ ಜೀವನವನ್ನು ಸಾರ್ಥಕಗೊಳಿಸಲು ನಾವೆಲ್ಲರೂ ಯೇಸುವಿನೊಂದಿಗೆ ನಡೆಯಬೇಕು ಎಂದು ಅವರು ಕರೆ ನೀಡಿದರು.ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಕ್ಕಳು, ಪೋಷಕರು ಹಾಗೂ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಿಂದ ಮಕ್ಕಳು, ಧರ್ಮಗುರುಗಳು ಹಾಗೂ ಪೋಷಕರು ಮೆರವಣಿಗೆಯಲ್ಲಿ ಸಿಎಸ್ಐ ಇಮ್ಮಾನುವೇಲ್ ದೇವಾಲಯಕ್ಕೆ ಆಗಮಿಸಿದರು. ಬಳಿಕ ದೇವಾರಾಧನೆ ಹಾಗೂ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸತ್ಯವೇದ ಪ್ರಶ್ನಾವಳಿ, ನೃತ್ಯ, ತುಳು ಬೈಬಲ್ ಪಠಣ, ಬೈಬಲ್ ಕಥನದ ಕಿರುಪ್ರಹಸನ, ಅಭಿನಯಗೀತೆ, ಬೋಧನಾ ಸಾಧನ ತಯಾರಿಕೆ ಹಾಗೂ ಬರವಣಿಗೆ ಸ್ಪರ್ಧೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಸಿಎಸ್ಐ ಕೆ.ಎಸ್.ಡಿ. ಧರ್ಮಾಧ್ಯಕ್ಷ ರೈಟ್ ರೆವ. ಹೇಮಚಂದ್ರ ಕುಮಾರ್ ಪ್ರಧಾನ ಅತಿಥಿಯಾಗಿ ಭಾಗವಹಿಸಿ ವಿಶೇಷ ಸಂದೇಶ ನೀಡಿದರು.ಸ್ಟೀಫನ್ ಕರ್ಕಡ ಸೇರಿದಂತೆ ವಿವಿಧ ದೇವಾಲಯಗಳ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷ ರೆವ. ಕಿಶೋರ್ ಕುಮಾರ್, ಉಪಾಧ್ಯಕ್ಷ ರೆವ. ಎಡ್ವಿನ್ ಜೋಸೆಫ್, ಕಾರ್ಯದರ್ಶಿ ಸಿರಿಲ್ ಸೋನ್ಸ್, ಖಜಾಂಚಿ ಡೇನಿಯೇಲ್ ಅಮ್ಮನ್ನ, ಸಹ ಸಭಾಪಾಲಕ ರೆವ. ನವೀನ್ ಆರ್. ಕೋಟ್ಯಾನ್, ಸಂಚಾಲಕ ಸೆಬಾಸ್ಟಿನ್ ಎಸ್. ಕೋಟ್ಯಾನ್, ಖಜಾಂಚಿ ಫ್ಲಾವ್ಯ ಅಂಬ್ಲರ್ ಸೇರಿದಂತೆ ಧರ್ಮಗುರುಗಳು, ಶಿಕ್ಷಕರು, ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಹೆಬ್ರಿಯ ಹಲವು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.