ಬೇವಿನಾಳ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕಾರಟಗಿ
ಇಲ್ಲಿಗೆ ಸಮೀಪದ ಬೇವಿನಾಳ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶುಕ್ರವಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರತರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಕಳುಹಿಸುವ ಭರವಸೆ ಪಡೆದರು.
೬ರಿಂದ ೧೪ ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು. ಯಾವ ಮಗವೂ ಶಿಕ್ಷಣದಿಂದ ವಂಚಿತವಾಗಬಾರದೆಂಬ ಮಹಾದಾಸೆಯಿಂದ ಸರ್ಕಾರ ಹಲವು ಯೋಜನಗಳನ್ನು ಜಾರಿಗೊಳಿಸಿದೆ. ಬೇಸಿಗೆಯ ರಜೆಯ ಆನಂತರ ಈಗ ಶಾಲೆಗಳು ಆರಂಭಗೊಂಡಿವೆ. ಬೇವಿನಹಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಭಿನ್ನ ರೀತಿಯ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಶುಕ್ರವಾರ ಸಾಕ್ಷಿಯಾದರು.ಚಿನ್ನಕ್ಕಿಂತ ಅನ್ನಲೇಸು, ಅನ್ನಕ್ಕಿಂತ ಅಕ್ಷರ ಲೇಸು, ದುಡ್ಡೆ ದೊಡ್ಡಪ್ಪ, ವಿದ್ಯೆ ಅದರಪ್ಪ, ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ... ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಸುತ್ತ, ಘೋಷಣೆಗಳನ್ನು ಕೂಗುತ್ತ, ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸುತ್ತ, ಕೊನೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದ ಸ್ಥಳಕ್ಕೆ ದೌಡಾಯಿಸಿದರು. ಅಲ್ಲಿ ದಾಖಲಾತಿ ಜಾಥಾದ ಮೂಲಕ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಸೇರಿಸಲು ಜಾಗೃತಿ ಮೂಡಿಸಿದರು.
ಶಾಲೆಯ ಮುಖ್ಯ ಗುರು ಕಳಕೇಶ ಗುಡ್ಲಾನೂರ, ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ, ಆಶಾ ಕಾರ್ಯಕರ್ತೆ ಶ್ರೀದೇವಿ, ರೇಣುಕಾ, ಸುನೀತಾ, ಶಿವಮ್ಮ, ಶಿಕ್ಷಣಪ್ರೇಮಿ ವಿರೂಪಾಕ್ಷಯ್ಯ ಮತ್ತಿತರರು ಪಾಲ್ಗೊಂಡಿದ್ದರು.