ರಾತ್ರಿಯಾದರೆ ಬಾರ್‌ ಆಗಿ ಬದಲಾಗುವ ಕಾರಟಗಿಯ ಬೂದುಗುಂಪಾ ಪ್ರೌಢಶಾಲಾ ಮೈದಾನ

KannadaprabhaNewsNetwork |  
Published : Jan 04, 2024, 01:45 AM IST
ಕಾರಟಗಿ ತಾಲೂಕಿನ ಬೂದುಗುಂಪಾ ಪ್ರೌಢಶಾಲೆ ಮಕ್ಕಳು ತರಗತಿ ಬಹಿಷ್ಕರಿಸಿ ಬುಧವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವಿಚಿತ್ರ ಎಂದರೆ ಬುಧವಾರ ಬೆಳಗ್ಗೆ ಶಾಲೆ ದೈಹಿಕ ಶಿಕ್ಷಕಿಯೊಬ್ಬರು ಮೈದಾನದಲ್ಲಿ ಬಿದ್ದಿದ್ದ ಬಾಟಲಿಗಳನ್ನು ಕೂಡಿಸಿ ಒಂದೆಡೆ ಹಾಕಿದ್ದಾರೆ. ಒಟ್ಟು ೫೭ ಬಿಯರ್‌ನ ಖಾಲಿ ಬಾಟಲಿಗಳು ಪತ್ತೆಯಾಗಿವೆ. ಇದು ಮಕ್ಕಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಮಕ್ಕಳು ತಪ್ಪಿದರೆ ಶಾಲೆ ಶಿಕ್ಷಕರಿಗೆ ಬಾಟಲಿ ಆರಿಸುವ ಕೆಲಸ ತಪ್ಪಿದಲ್ಲ ಎನ್ನುವ ವಿಷಯ ಶಿಕ್ಷಣ ಇಲಾಖೆಗೂ ಗೊತ್ತಿದ್ದರೂ ಮೌನವಾಗಿದೆ.

ಕಾರಟಗಿ: ನಿತ್ಯ ಬೆಳಗ್ಗೆ ಶುಭ್ರವಾಗಿ ಶಾಲೆಗೆ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಕೊಠಡಿಗಳಿಗೆ ತೆರಳುವ ಮೊದಲು ಶಾಲೆಯ ಮೈದಾನ ಸ್ವಚ್ಛಗೊಳಿಸಬೇಕಿದೆ. ಶಾಲೆಯ ಮೈದಾನವನ್ನೇನೋ ವಿದ್ಯಾರ್ಥಿಗಳು ಸ್ವಚ್ಛಗೊಳಿಸಲು ಅಡ್ಡಿ ಇಲ್ಲ. ಮೈದಾನದಲ್ಲಿ ಕಸ ಕಡ್ಡಿ, ಗಿಡಗಂಟೆ ಸ್ವಚ್ಛಗೊಳಿಸಬಹುದು. ಆದರೆ, ಶಾಲೆಯ ಮೈದಾನ ನಿತ್ಯ ರಾತ್ರೋರಾತ್ರಿ ಬಾರ್ ಆದರೆ, ಮಕ್ಕಳ ಪರಿಸ್ಥಿತಿ ಅಧೋಗತಿ. ಇದು ಮೇಲ್ನೋಟಕ್ಕೆ ಹಗಲಿನಲ್ಲಿ ಮಕ್ಕಳಿಗೆ ಪಾಠ ರಾತ್ರಿ ಕುಡಕರಿಗೆ ಆಟದ ಮೈದಾನವಾಗಿದೆ.ಇಂಥ ಪರಿಸ್ಥಿತಿಯನ್ನು ತಾಲೂಕಿನ ಬೂದುಗುಂಪಾ ಗ್ರಾಮದ ಹೊರವಲಯದ ಸರ್ಕಾರಿ ಪ್ರೌಢಶಾಲೆ ಮಕ್ಕಳನ್ನು ಕಾಡುತ್ತಿದೆ. ಮಕ್ಕಳು ದಿನಂಪತ್ರಿ ಬೆಳಗ್ಗೆ ಪ್ರಾರ್ಥನೆ, ತರಗತಿ ಪ್ರಾರಂಭಕ್ಕೂ ಮುನ್ನ ಖಾಲಿ ಬಾಟಲಿ, ದೇಸೀ ಮದ್ಯದ ಟೆಟ್ರಾ ಪಾಕೇಟ್‌, ನೀರಿನ ಬಾಟಲಿಗಳನ್ನು ಆರಿಸಿ, ಗೂಡಿಸಬೇಕಾಗಿದೆ.ಈ ಪರಿಸ್ಥಿತಿಯನ್ನು ತಪ್ಪಿಸಿ, ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಿ ಮತ್ತು ಪ್ರತಿಯೊಂದು ವಿಷಯಕ್ಕೆ ಶಿಕ್ಷಕರನ್ನು ನೇಮಕ ಮಾಡಲು ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ ಘಟನೆ ಸಹ ನಡೆದಿದೆ.ವಿಚಿತ್ರ ಎಂದರೆ ಬುಧವಾರ ಬೆಳಗ್ಗೆ ಶಾಲೆ ದೈಹಿಕ ಶಿಕ್ಷಕಿಯೊಬ್ಬರು ಮೈದಾನದಲ್ಲಿ ಬಿದ್ದಿದ್ದ ಬಾಟಲಿಗಳನ್ನು ಕೂಡಿಸಿ ಒಂದೆಡೆ ಹಾಕಿದ್ದಾರೆ. ಒಟ್ಟು ೫೭ ಬಿಯರ್‌ನ ಖಾಲಿ ಬಾಟಲಿಗಳು ಪತ್ತೆಯಾಗಿವೆ. ಇದು ಮಕ್ಕಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಮಕ್ಕಳು ತಪ್ಪಿದರೆ ಶಾಲೆ ಶಿಕ್ಷಕರಿಗೆ ಬಾಟಲಿ ಆರಿಸುವ ಕೆಲಸ ತಪ್ಪಿದಲ್ಲ ಎನ್ನುವ ವಿಷಯ ಶಿಕ್ಷಣ ಇಲಾಖೆಗೂ ಗೊತ್ತಿದ್ದರೂ ಮೌನವಾಗಿದೆ.ಈ ಎಲ್ಲ ಪರಿಸ್ಥಿತಿ ನೋಡಿಕೊಂಡು ಬೂದುಗುಂಪಾ, ಹಾಲಸಮುದ್ರ, ತಿಮ್ಮಾಪುರ ತ್ರಿವಳಿ ಗ್ರಾಮಗಳ ೧೫೦ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸ ಮಾಡುವ ಏಕೈಕ ಪ್ರೌಢಶಾಲೆಯನ್ನು ಕೂಡಲೇ ಅಧಿಕಾರಿಗಳು ಸಂರಕ್ಷಿಸಬೇಕು. ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಪ್ರೌಢಶಾಲೆ ಮೈದಾನವು ಕುಡುಕರ ಅಡ್ಡೆಯಾಗಿದ್ದು, ಇದನ್ನು ರಕ್ಷಿಸಬೇಕು. ನಿತ್ಯ ಕುಡಿದು ಬಾಟಲಿ ಗಾಜು ಪುಡಿ ಮಾಡಿ ಬೀಸಾಡುತ್ತಾರೆ. ಮಕ್ಕಳು ಬೆಳಗ್ಗೆ ನಿತ್ಯ ಗಾಜುಗಳನ್ನು ಆರಿಸಿ ಸ್ವಚ್ಛಗೊಳಿಸುತ್ತಾರೆ. ಈ ಸ್ಥಿತಿಯನ್ನು ತಪ್ಪಿಸಬೇಕು ಎಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.ಕಳೆದ ೭ ತಿಂಗಳಿನಿಂದ ಹಿಂದಿ ವಿಷಯಕ್ಕೆ ಶಿಕ್ಷಕರಿಲ್ಲ. ಇನ್ನು ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿದೆ. ೮೦ ವಿದ್ಯಾರ್ಥಿಗಳು ಈ ಬಾರಿ ೧೦ನೇ ತರಗತಿಯಲ್ಲಿದ್ದಾರೆ. ಅವರ ಮುಂದಿನ ಪರಿಸ್ಥಿತಿ ಏನು? ಇದಕ್ಕೆ ಯಾರು ಜವಾಬ್ದಾರಿ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಶಿಕ್ಷಕರ ನೇಮಕಕ್ಕೆ ಹೋರಾಟ ನಡೆಸಿದ್ದರೂ ಶಿಕ್ಷಣ ಇಲಾಖೆ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಗಂಗಾವತಿ ಬಿಇಒ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಜತೆಗೆ ಕಾರಟಗಿ ಪೊಲೀಸರು, ಅಬಕಾರಿ ಅಧಿಕಾರಿಗಳು ಶಾಲೆ ಮತ್ತು ಗ್ರಾಮದ ಎಲ್ಲೆಡೆ ಹರಡಿದ ಅಕ್ರಮ ಮದ್ಯದ ತಾಣ, ಅಕ್ರಮ ಮದ್ಯ ತಡೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಶಿವಕುಮಾರಗೌಡ ತೆಕ್ಕಲಕೋಟೆ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಮಾಲಿಪಾಟೀಲ್, ಕಾರ್ಯದರ್ಶಿ ಮಲ್ಲಿಕಾರ್ಜುನ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಶಾಲೆ ವಿದ್ಯಾರ್ಥಿಗಳು ಇದ್ದರು.ಶಾಲಾ ಮೈದಾನದಲ್ಲಿ ಕುಡುಕರ ಹಾವಳಿ ಮಿತಿ ಮೀರಿದ ವಿಚಾರ ಗಮನಕ್ಕೆ ಬಂದಿದೆ. ಕುಡುಕರ ಉಪಟಳಕ್ಕೆ ಕಡಿವಾಣ ಹಾಕಲು ಗ್ರಾಮಸ್ಥರ ಜತೆ ಸಭೆ ನಡೆಸಲಾಗುವುದು. ಜತೆಗೆ ಶಾಲೆಗೆ ತ್ವರಿತವಾಗಿ ವಾರದೊಳಗೆ ಹಿಂದಿ ಶಿಕ್ಷಕರ ವ್ಯವಸ್ಥೆ ಮಾಡಲಾಗುವುದು ಎನ್ನುತ್ತಾರೆ ಗಂಗಾವತಿ ಬಿಇಒ ವೆಂಕಟೇಶ ಆರ್.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ