31ರಂದು ಶಾಲಾ ಪ್ರಾರಂಭೋತ್ಸವ: ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ

KannadaprabhaNewsNetwork | Published : May 29, 2024 12:54 AM

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮೇ.31ರಂದು ನಡೆಯಲಿದ್ದು, ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಇಲಾಖೆ ವಿತರಿಸುತ್ತಿರುವ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಕರೆ ನೀಡಿದರು.

ಬ್ಯಾಡಗಿ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮೇ.31ರಂದು ನಡೆಯಲಿದ್ದು, ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಇಲಾಖೆ ವಿತರಿಸುತ್ತಿರುವ ಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಕರೆ ನೀಡಿದರು.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, 2024- 25ನೇ ಸಾಲಿನ ಪ್ರಧಾನ ಮಂತ್ರಿ ಪೋಶಣ ಶಕ್ತಿ ನಿರ್ಮಾಣ ಯೋಜನೆ ಅಡಿಯಲ್ಲಿ ಮೇ 29ರಂದು ಪ್ರಸ್ತುತ ಶೈಕ್ಷಣಿಕ ವರ್ಷದ ಮಧ್ಯಾಹ್ನದ ಉಪಾಹಾರ ಯೋಜನೆ ಆರಂಭಿಸಬೇಕು. ಮೇ 31ರಂದು ನಡೆಯುವ ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಸಿಹಿ ಊಟ ನೀಡಿ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವಂತೆ ತಿಳಿಸಿದ್ದಾರೆ.

ಮೊದಲಿದ್ದ ಧಾನ್ಯಗಳ ಗುಣಮಟ್ಟ ಪರಿಶೀಲಿಸಿ: ಶಾಲೆಯಲ್ಲಿ ಇರುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿ ಅಡುಗೆ ಸಿಬ್ಬಂದಿಗಳ ಸಹಕಾರದಿಂದ ಸ್ವಚ್ಛಗೊಳಿಸಿ ಆಹಾರ ಧಾನ್ಯಗಳನ್ನು ಬಳಸಿಕೊಳ್ಳಬೇಕು, ಪಾತ್ರೆ ಪರಿಕರಗಳನ್ನು ಶುದ್ಧವಾದ ಬಿಸಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು, ಆಹಾರ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿ ಶುಚಿಗೊಳಿಸಿಟ್ಟು ಬಿಸಿಯೂಟದಲ್ಲಿ ಬಳಕೆ ಮಾಡಬೇಕು ಯಾವುದೇ ಕಾರಣಕ್ಕೂ ಕೆಟ್ಟಂತಹ ಆಹಾರ ಧಾನ್ಯಗಳನ್ನು ಬಳಕೆ ಮಾಡದಿರುವಂತೆ ಸೂಚಿಸಿದ್ದಾರೆ.

ನೀರಿನ ಮೂಲವನ್ನು ಶುದ್ಧಗೊಳಿಸಿ:ನೀರಿನ ಸಂಗ್ರಹದ ಮೂಲಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ನೀರನ್ನು ಸಂಗ್ರಹಿಸಿ ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಲ್ಲದೇ ಎಲ್ಲ ರೀತಿಯ ಟ್ಯಾಂಕ್‌ಗಳನ್ನು ಶುದ್ಧಗೊಳಿಸಿ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಬಳಕೆ ಮಾಡುವಂತಹ ಗ್ಯಾಸ್ ಒಲೆ ಮತ್ತು ಸಿಲೆಂಡರ್‌ಗಳು ಹಾಗೂ ಕುಕ್ಕರ್ ಸುರಕ್ಷತೆಯ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನಿಡಿದ್ದಾರೆ.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಎಫ್. ಹುಲ್ಯಾಳ ಮಾತನಾಡಿ, ಪುರಸಭೆ ಹಾಗೂ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳ ಸಹಕಾರದೊಂದಿಗೆ, ಶೌಚಾಲಯಗಳನ್ನು ಶುದ್ಧಗೊಳಿಸಬೇಕು ಯಾವುದೇ ದುರ್ವಾಸನೆಗೆ ಅವಕಾಶ ನೀಡದಂತೆ ಸೂಕ್ತವಾದ ರೀತಿಯಲ್ಲಿ ಶುದ್ಧಗೊಳಿಸುವಂತೆ ಸೂಚಿಸಿದರು.

ಪೂರಕ ಪೌಷ್ಟಿಕಾಂಶ ಯೋಜನೆ: ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್. ತಿಮ್ಮಾರೆಡ್ಡಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಪೂರಕ ಪೌಷ್ಟಿಕಾಂಶ ಯೋಜನೆಯಡಿಯಲ್ಲಿ ವಾರಕ್ಕೆ ಎರಡು ದಿನದಂತೆ ಒಟ್ಟು 80 ದಿನಗಳ ಅವಧಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಬೇಕು, ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ 5 ದಿನಗಳಂತೆ 150 ಎಂ.ಎಲ್. ಬಿಸಿ ಹಾಲನ್ನು ನೀಡುವ ಮೂಲಕ ಕ್ಷೀರಭಾಗ್ಯ ಯೋಜನೆಯನ್ನು ಯಶಸ್ವಿಗೊಳಿಸುವಂತೆ ಸೂಚನೆ ನೀಡಿದರಲ್ಲದೇ ನಿವೃತ್ತಿಯಾದ ಅಡುಗೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರಯುತವಾಗಿ ಕಳುಹಿಸಿಕೊಡುವಂತೆ ಸೂಚಿಸಿದರು.