ಶಾಲಾ ಪ್ರಾರಂಭೋತ್ಸವ, ಗುಲಾಬಿ ಹೂ, ಸಿಹಿ ನೀಡಿ ಬರಮಾಡಿಕೊಂಡ ಶಿಕ್ಷಕರು

KannadaprabhaNewsNetwork |  
Published : Jun 01, 2024, 12:45 AM IST
೩೧ಎಚ್‌ವಿಆರ್೧- | Kannada Prabha

ಸಾರಾಂಶ

ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಅಕ್ಷರಶಃ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಾಲಾ ಕೊಠಡಿ, ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಿಸುವ ಮೂಲಕ ಶಿಕ್ಷಕರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡರು.

ಹಾವೇರಿ: ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲಿ ಅಕ್ಷರಶಃ ಹಬ್ಬದ ವಾತಾವರಣ ಮನೆ ಮಾಡಿತ್ತು. ಶಾಲಾ ಕೊಠಡಿ, ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ವಿತರಿಸುವ ಮೂಲಕ ಶಿಕ್ಷಕರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡರು. ಶಾಲಾ ಪ್ರಾರಂಭೋತ್ಸವದ ಮೊದಲ ದಿನವೇ ಬಹುತೇಕ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡುಬಂದಿತು. ಮೇ ೨೯ರಿಂದಲೇ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಶಾಲಾ ಪ್ರಾರಂಭೋತ್ಸವ ಹಿನ್ನೆಲೆ ಕಳೆದೆರಡು ದಿನಗಳಿಂದ ಬಹುತೇಕ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ, ಕೊಠಡಿ ಸ್ವಚ್ಛತೆ, ಕುಡಿಯುವ ನೀರಿನ ಟ್ಯಾಂಕ್ ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಶಾಲಾರಂಭದ ಮೊದಲ ದಿನ ಶುಕ್ರವಾರ ಬೆಳಗ್ಗೆ ಜಿಲ್ಲೆಯ ವಿವಿಧ ಸರಕಾರಿ ಶಾಲೆಗಳ ಆವರಣದಲ್ಲಿ ಬಿಡಿಸಲಾಗಿದ್ದ ಬಣ್ಣಬಣ್ಣದ ರಂಗೋಲಿ ನೋಡುಗರ ಆಕರ್ಷಣೆಗೆ ಒಳಗಾಗಿದ್ದವು. ಇನ್ನೂ ಪ್ರವೇಶದ್ವಾರ ಹಾಗೂ ಕೊಠಡಿಗಳಲ್ಲಿ ರಂಗುರಂಗಿನ ಬಲೂನ್‌ಗಳು, ಬಾಳೆಕಂಬ, ತೆಂಗಿನ ಗರಿ ಹಾಗೂ ಮಾವಿನ ತಳಿರುತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಶಾಲಾ ಆವರಣಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡು ಶಾಲಾ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿದವು. ಗುಲಾಬಿ ಹೂವು ನೀಡಿ ಸ್ವಾಗತ: ಶಾಲಾ ಪ್ರಾರಂಭೋತ್ಸವದ ಮೊದಲ ದಿನ ತರಗತಿಗಳಿಗೆ ಹಾಜರಾಗಲು ಬಂದಿದ್ದ ೧ ರಿಂದ ೧೦ನೇ ತರಗತಿ ಮಕ್ಕಳಿಗೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಮಕ್ಕಳಿಗೆ ಗುಲಾಬಿ ಹೂವು, ಚಾಕಲೇಟ್, ಸಿಹಿ, ಪೆನ್ನು, ಪುಸ್ತಕ, ಡ್ರಾಯಿಂಗ್ ಕ್ರೇಯಾನ್ಸ್, ಮಹಾತ್ಮರ ಜೀವನ ಚರಿತ್ರೆ, ಡಿಕ್ಷನರಿಯಂತಹ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಜತೆಗೆ ಮಕ್ಕಳನ್ನು ಮತ್ತಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಟೋಪಿ ಹಾಕಿ ಸ್ವಾಗತಿಸುತ್ತಿದ್ದ ದೃಶ್ಯ ಕಂಡುಬಂದವು.ಪಠ್ಯಪುಸ್ತಕ, ಸಮವಸ್ತ್ರ ವಿತರಣೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಪೂರೈಕೆ ಮಾಡಲಾಗಿದೆ. ಕೆಲ ಶಾಲೆಗಳಲ್ಲಿ ಶಾಲಾ ಪ್ರಾರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಇನ್ನೂ ಹಲವೆಡೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹಂತಹಂತವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಸಿದ್ದತೆಯನ್ನು ಕೈಗೊಂಡಿದ್ದಾರೆ. ಶಾಲೆಗಳಿಗೆ ಅಧಿಕಾರಿಗಳ ಭೇಟಿ: ಜಿಲ್ಲಾದ್ಯಂತ ಶುಕ್ರವಾರ ಆರಂಭಗೊಂಡ ಶಾಲೆಗಳಿಗೆ ಶಿಕ್ಷಣ ಇಲಾಖೆ ವಿವಿಧ ಅಕಾರಿಗಳ ತಂಡ ಭೇಟಿ ನೀಡಿ ಮಕ್ಕಳಿಗೆ ಶುಭ ಹಾರೈಸಿದರು. ಇನ್ನು ಮಿಂಚಿನ ಸಂಚಾರ ಕಾರ್ಯಕ್ರಮದಡಿ ಡಿಡಿಪಿಐ ಸುರೇಶ ಹುಗ್ಗಿ ಹಾಗೂ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಕಾರಿಗಳು, ಅಕ್ಷರದಾಸೋಹದ ವಿಸ್ತರಣಾಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಪ್ರಾರಂಭ, ಸ್ವಚ್ಛತೆ ಕುರಿತಾಗಿ ಪರೀಶಿಲನೆ ನಡೆಸಿದರು.ಚಕ್ಕಡಿ ಏರಿ ಬಂದ ಮಕ್ಕಳು: ತಾಲೂಕಿನ ಕೋಳೂರ ಗ್ರಾಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ವಿಜ್ಞಾನಿಗಳ ಭಾವಚಿತ್ರ, ವಿವಿಧ ಚಿತ್ರಕಲೆಗಳು ಹಾಗೂ ಅಲಂಕಾರಿಕ ಸಾಮಗ್ರಿಗಳಿಂದ ಬಿಡಿಸಿದ್ದ ಚಿತ್ರಗಳನ್ನು ಚಕ್ಕಡಿಗೆ ಅಂಟಿಸಿ ಶೃಂಗರಿಸಲಾಗಿತ್ತು. ಶಾಲಾರಾಂಭದ ಮೊದಲ ದಿನ ಮಕ್ಕಳನ್ನು ಶೃಂಗರಿಸಿದ ಚಕ್ಕಡಿಯಲ್ಲಿ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿಸುವ ಮೂಲಕ ಕರೆತರಲಾಯಿತು. ಶಿಕ್ಷಕರೇ ಟೋಪಿಯನ್ನು ಹಾಕಿಕೊಂಡು ಚಕ್ಕಡಿ ಹೊಡೆದುಕೊಂಡು ಬಂದಿದ್ದು ವಿಶೇಷವಾಗಿತ್ತು.ಮಕ್ಕಳಿಗೆ ಸಿಹಿ ಊಟ ವಿತರಣೆ: ಶಾಲಾ ಪ್ರಾರಂಭೋತ್ಸವದ ಮೊದಲ ದಿನವಾದ ಶುಕ್ರವಾರ ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಜತೆಗೆ ಸಿಹಿಊಟವನ್ನು ಬಡಿಸಲಾಯಿತು. ಪ್ರಮುಖವಾಗಿ ಗೋ ಹುಗ್ಗಿ, ಶ್ಯಾವಿಗೆ ಪಾಯಸ, ಹೋಳಿಗೆ, ಕಡುಬು, ಸಿರಾ, ಅನ್ನ, ಸಾಂಬಾರ, ಚಿತ್ರಾನ್ನ, ಮೊಸರನ್ನ, ಪಲಾವ್ ಸೇರಿದಂತೆ ಮತ್ತಿತರ ವಿಶೇಷ ಅಡುಗೆಯನ್ನು ತಯಾರಿಸಿ ಶಾಲಾ ಮಕ್ಕಳಿಗೆ ಬಡಿಸಲಾಯಿತು. ಇನ್ನೂ ಬೆಳಗಿನ ವೇಳೆಯಲ್ಲಿ ಹಾಲು, ಬಿಸ್ಕೀಟ್, ಬಾದಾಮಿಹಾಲು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ