ಕನಕಪುರ: ಶಿಥಿಲಗೊಂಡಿರುವ ಕೋನಮಾನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಠಡಿ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ವರದಿ ಸಲ್ಲಿಸುವ ಕುರಿತು ಸದಸ್ಯರು ಹಾಗೂ ಅಧಿಕಾರಿಗಳು ನಿರ್ಧರಿಸಿದರು.
ತಾಲೂಕಿನ ಕಸಬಾ ಹೋಬಳಿಯ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಿಡಿಒ ಹನುಮಪ್ಪ ರೇಣಿ ಮಾತನಾಡಿ, ಕೋನಮಾನಹಳ್ಳಿ ಸರ್ಕಾರಿ ಶಾಲೆ, ಶಿಥಿಲಗೊಂಡು ಕೊಠಡಿಯ ಮೇಲ್ಚಾವಣಿಯಲ್ಲಿ ಹಾಕಿರುವ ಹೆಂಚುಗಳು ಜಾರಿ ಬೀಳುತ್ತಿವೆ. ಮಳೆ ಬಂದಾಗ ಮೇಲ್ಚಾವಣಿ ಸೋರುತ್ತಿರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ. ಕೊಠಡಿಗಳು ಬಿರುಕು ಬಿಟ್ಟಿವೆ. ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲ. ಶಾಲಾ ಕೊಠಡಿ ಮರು ನಿರ್ಮಾಣ ಮಾಡಿಕೊಡುವಂತೆ ಶಾಲೆಯ ಶಿಕ್ಷಕರು ಮನವಿ ಮಾಡಿದ್ದಾರೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಾಡಿಗೆ ಕೊಠಡಿಗೆ ಮಕ್ಕಳನ್ನು ಸ್ಥಳಾಂತರಿಸಲು ತೀರ್ಮಾನಿಸಿ ನೂತನ ಕೊಠಡಿ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಅಂಗನವಾಡಿ ಶಾಲಾ ಕಟ್ಟಡಗಳ ಮತ್ತು ಅಲ್ಲಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಅಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಬೇಕು. ಇತರೆ ಇಲಾಖೆಯ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಯೋಜನೆ ಅಡಿಯಲ್ಲಿ ಪಂಚಾಯತಿ ಕಲಿಕಾ ಕೇಂದ್ರ ತೆರೆಯಲು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಬೇಕು. ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲು ಅಳ್ಳಿಮಾರನಹಳ್ಳಿ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಪೊಲೀಸ್ ಇಲಾಖೆ ಕೊಟ್ಟಿರುವ ಸೂಚನೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. ಸದಸ್ಯರು ಗ್ರಾಮಗಳಲ್ಲಿ ಬೀದಿ ದೀಪ, ಚರಂಡಿ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯವನ್ನು ಕಲ್ಪಿಸುವ ಬಗ್ಗೆ ಚರ್ಚೆ ನಡೆಸಿ ಆಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಪಂಚಾಯತಿ ಸದಸ್ಯರಾದ ಮಂಜು ಕಿರಣ್, ಲೋಹಿತ್ ಗೌಡ, ರಾಜು ಗಾಂಧಿ ನಾಯಕ್, ದೇವರಾಜು, ಎಲ್ಲಮ್ಮ, ಜ್ಯೋತಿಬಾಯಿ, ಸುಧಾರಾಣಿ, ಸಿಬ್ಬಂದಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02:ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಗೌರಮ್ಮ ಉಪಾಧ್ಯಕ್ಷೆ ಸುಜಾತ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.