ಹಗರಿಬೊಮ್ಮನಹಳ್ಳಿ: ತಾಲೂಕಿನ ಉಪ್ಪಾರಗಟ್ಟಿ ಗ್ರಾಮದ ಬಾಲಕ ಪೃಥ್ವಿರಾಜ (೧೧) ಪಟ್ಟಣ ಸಮೀಪದ ಬಂಡಿಹಳ್ಳಿ ಬಳಿಯ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಶಾಲೆ ರಜೆ ನಿಮಿತ್ತ ೪ನೇ ತರಗತಿಯ ಐವರು ಗೆಳೆಯರ ಗುಂಪು ತಾಲೂಕಿನ ಬಂಡಿಹಳ್ಳಿ ಗುಡ್ಡಕ್ಕೆ ತೆರಳಿತ್ತು. ನಂತರ ಗ್ರಾಮದ ಬಳಿಯ ಚಿಂತ್ರಪಳ್ಳಿ ಕೆರೆ ಏರಿಯ ಮೇಲೆ ಕೆಲ ಕಾಲ ಆಟವಾಡಿದ್ದಾರೆ. ಐವರ ಪೈಕಿ ಮೃತ ಪೃಥ್ವಿರಾಜ ನೀರಿಗಿಳಿದಿದ್ದಾರೆ. ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮೂವರು ಗೆಳೆಯರು ಅಲ್ಲಿಂದ ಮನೆಗೆ ಓಡಿ ಹೋಗಿದ್ದಾರೆ. ಆದರೆ, ಪೃಥ್ವಿರಾಜನನ್ನು ರಕ್ಷಿಸುವ ಭರದಲ್ಲಿ ಗೆಳೆಯ ಆಕಾಶ್ ಸಹಿತ ನೀರಿನಲ್ಲಿ ಮುಳುಗಿ, ಜೀವ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದ. ದೂರದಲ್ಲಿದ್ದ ಕುರಿಗಾಹಿಗಳು ಓಡಿ ಬಂದು ಆಕಾಶನನ್ನು ಮೇಲೆತ್ತಿದರು. ಆತ ಕುಡಿದಿದ್ದ ನೀರನ್ನು ಹೊರ ತೆಗೆದರು. ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಕಾಶ ತನ್ನ ಗೆಳೆಯ ಮುಳುಗಿರುವ ಕುರಿತು ಮಾಹಿತಿ ನೀಡಿದ. ಆದರೆ, ತಡವಾಗಿ ಮಾಹಿತಿ ಒದಗಿದ ಬಳಿಕ ಶೋಧ ನಡೆಸಿದಾಗ ಪೃಥ್ವಿರಾಜ ಶವವಾಗಿ ಪತ್ತೆಯಾಗಿದ್ದಾನೆ. ಈ ಕುರಿತು ಹಗರಿಬೊಮ್ಮನಹಳ್ಳಿ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.