ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಮಾನವನ ಬದುಕಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲ್ಲದೆ ಊಹಿಸಿಕೊಳ್ಳುವುದು ಕಷ್ಟಸಾಧ್ಯ ಎಂದು ಹೇಳಿದರು.
ಸರ್ವರಿಗೂ ವಿಜ್ಞಾನ, ಸುಲಭ ವಿಜ್ಞಾನ, ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಎಂಬ ಆಶಯದೊಂದಿಗೆ ನಾಡಿನಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ವಿಜ್ಞಾನವನ್ನು ಜನಪ್ರಿಯಗೊಳಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಭೂಮೇಲ್ಮೈ ವಾತಾವರಣ (ಮಳೆ, ಬಿಸಿಲು, ಚಳಿ ಸೇರಿದಂತೆ )ಪ್ರಾಕೃತಿಕವಾಗಿ ಪ್ರತೀ ನಿತ್ಯದ ಚಟುವಟಿಕೆಯನ್ನು ಮುಂಚಿತವಾಗಿಯೇ ತಿಳಿಯುವಂತಾಗಲು ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯವಶ್ಯಕವಾಗಿದೆ ಎಂದು ಸಚಿವರು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿಯೇ ಮಾಹಿತಿ ದೊರೆಯುತ್ತಿದ್ದು, ಇದನ್ನು ಹೆಚ್ಚು ಬಳಸಬೇಕು. ಇದರಿಂದ ಹಂತ ಹಂತವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಎನ್.ಎಸ್.ಭೋಸರಾಜು ಅವರು ನುಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾನವನ ಬೆಳವಣಿಗೆಗೆ ಅತ್ಯವಶ್ಯಕ. ಆ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ವಿಶ್ವದಲ್ಲಿ ಅಗಾಧವಾಗಿ ಬೆಳೆದಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಪ್ರಸ್ತುತ ಕೃತಕ ಬುದ್ದಿಮತ್ತೆ(ಎಐ) ವರೆಗೂ ಮುಂದುವರಿದಿದೆ. ಆ ನಿಟ್ಟಿನಲ್ಲಿ ಒಳ್ಳೆಯದನ್ನು ಸರಿಯಾಗಿ ಬಳಸಿಕೊಂಡು ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ನಾಡಿನ ಭಾಷೆ ಹಾಗೂ ಮಾತೃ ಭಾಷೆ ಕನ್ನಡವಾಗಿದ್ದು, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದರು.
ಕನ್ನಡ ಆಡಳಿತ ಭಾಷೆಯಾಗಿದ್ದು, ಸಂಬಂಧಗಳ ಆಧಾರದಲ್ಲಿ ನಾಡನ್ನು ಕಟ್ಟಲಾಗಿದೆ. ಸಂಸ್ಕೃತಿ ಭಾವೈಕ್ಯತೆಯ ಬೀಡು ಕರ್ನಾಟಕದ್ದಾಗಿದೆ ಎಂದು ಎಸ್.ಎಲ್.ಭೋಜೇಗೌಡ ಅವರು ಪ್ರತಿಪಾದಿಸಿದರು.
‘ಹೆಚ್ಚಿನ ಅಧ್ಯಯನವೆಂದು ಹೇಳಿಕೊಂಡು ವಿದೇಶಕ್ಕೆ ತೆರಳಿ ಲಕ್ಷ ಲಕ್ಷ ಸಂಬಳ ಪಡೆಯುತ್ತಾರೆ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ನೀಡುತ್ತಾರೆ. ಇದುವೆ ಕಲಿಕಾ ಸಂಸ್ಕೃತಿ ಎಂದು ಪ್ರಶ್ನಿಸಿದರು.’
ಕನ್ನಡ ನಾಡುನುಡಿ ಬಗ್ಗೆ ಹೆಮ್ಮೆ ಇರಬೇಕು. ಮನುಷ್ಯತ್ವ ಗುಣ ಪ್ರತಿಯೊಬ್ಬರಲ್ಲೂ ಇರಬೇಕು. ಏನಾದರೂ ಆಗು ಮೊದಲು ಮಾನವನಾಗು, ಆ ನಿಟ್ಟಿನಲ್ಲಿ ಮಾನವೀಯ ಮೌಲ್ಯ ಕಳೆದುಕೊಳ್ಳಬಾರದು ಎಂದರು.ಮಕ್ಕಳಿಗೆ ಜೀವನದ ಮತ್ತು ಬದುಕಿನ ಶಿಕ್ಷಣ ಕಲಿಸಬೇಕು. ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಗಾಂಧಿ, ಕುವೆಂಪು, ಪುರಂದರ ದಾಸರು, ಕನಕದಾಸರು, ನಾರಾಯಣಗುರು ಹೀಗೆ ಹಲವು ದಾರ್ಶನಿಕರ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಆ ನಿಟ್ಟಿನಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ನಾಡುನುಡಿಯ ಬಗ್ಗೆ ಶಿಕ್ಷಣ ತಜ್ಞರ ಮೂಲಕ ಪಠ್ಯಪುಸ್ತಕ ರಚಿಸಬೇಕು. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಭೋಜೇಗೌಡ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಂಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವ ಜೀವನದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ ಎಂದರು.ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರು ಸ್ವಾಗತಿಸಿ ಮಾತನಾಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವುದು. ಆಧುನಿಕ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ವಿಶ್ವ ವಿದ್ಯಾಲಯಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಎಂ.ರಮೇಶ್ ಅವರು ಮಾತನಾಡಿ ಇದುವರೆಗೆ 50 ಸಮ್ಮೇಳನವನ್ನು ಆಯೋಜಿಸಲಾಗಿದೆ. ವಿವಿಧ ಉಪನ್ಯಾಸ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 30 ಕ್ಕೂ ಹೆಚ್ಚು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಕನ್ನಡದಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಆಯೋಜಿಸಿರುವುದು ವಿಶೇಷವಾಗಿದೆ ಎಂದರು.ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಎಚ್.ಜಂಗಮಶೆಟ್ಟಿ, ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ತರೀಕೆರೆ ಸಿ.ತಾರಾನಾಥ್, ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಆರ್.ಗಂಗಾಧರ್, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆನಂದ ಎಸ್. ದೇಶಪಾಂಡೆ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ಬೀದರ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ, ಬೆಂಗಳೂರು ಕವಿತಂಅ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಎಂ.ರಮೇಶ್, ಎಫ್‌ಎಂಕೆಎಂಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಬಿ.ರಾಘವ, ಸಿಂಡಿಕೇಟ್ ಸದಸ್ಯರಾದ ಪುಟ್ಟರಾಜಪ್ಪ, ಡಾ.ವಾಣಿ ಎಂ., ಕೆ.ಎನ್.ಜನಾರ್ಧನ್, ಡಾ.ದಯಾನಂದ ಕೆ.ಸಿ., ಡಾ.ಎಂ.ಜಿ.ಕಾವೇರಿಯಪ್ಪ, ಡಾ.ಡಿ.ಕೆ.ಸರಸ್ವತಿ, ಕುಲಸಚಿವರಾದ (ಮೌಲ್ಯಮಾಪನ) ಡಾ.ಎಂ.ಸುರೇಶ, ಇತರರು ಇದ್ದರು.