ಮೂರು ಹೊಸ ವಿಜ್ಞಾನ ಪುಸ್ತಕಗಳ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಕಾರವಾರಮೊದಲೆಲ್ಲ ವಿಜ್ಞಾನ ಲೇಖನಗಳೆಂದರೆ ಜಟಿಲವಾಗಿದ್ದು, ಸಾಮಾನ್ಯ ಓದುಗರನ್ನು ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ಇತ್ತು. ಆದರೆ ಹೊಸ ತಲೆಮಾರಿನ ಬರಹಗಾರರು ಅದನ್ನು ಸರಳೀಕರಿಸಿ ಜನಪ್ರಿಯರಾಗಿದ್ದಾರೆ ಎಂದು ಕನ್ನಡ ಪ್ರಭ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅಭಿಪ್ರಾಯಪಟ್ಟರು.ಬುಕ್ಸ್ ಲೋಕ ಪ್ರಕಾಶನ ಹಾಗೂ ಸಾಗರ ಸಂಗಮ ಎಂಜಿನಿಯರ್ಸ್ ಅಸೋಸಿಯೇಶನ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸುನೀಲ್ ಬಾರ್ಕೂರ್ ಅವರ ''''ಒಂಟಿತೋಳಗಳ ಬೆನ್ನು ಹತ್ತಿದವರು'''' , ಕೊಳ್ಳೇಗಾಲ ಶರ್ಮ ಅವರ ''''''''ಪ್ಲಾಸ್ಟಿಕಾಯಣ'''''''' ಹಾಗೂ ಟಿ.ಜಿ. ಶ್ರೀನಿಧಿಯವರ ''''ಮೈಸೂರಿನ ಚುರುಮುರಿಗೆ ಅಂತರಿಕ್ಷದ ಟೊಮೇಟೊ'''''''' ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. "ವಿಜ್ಞಾನ ತಂತ್ರಜ್ಞಾನ ಕ್ಷೇತ್ರವು ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯನ್ನು ಜನರಿಗೆ ತಲುಪಿಸುವ ಜವಾಬ್ದಾರಿ ವಿಜ್ಞಾನ ಸಂವಹನಕಾರರದ್ದು. ಪತ್ರಿಕೆ, ಪುಸ್ತಕಗಳು ನೀಡುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಹೆಚ್ಚು ಜನರನ್ನು ತಲುಪುವ ಅವಕಾಶ ಇಂದು ನಮ್ಮೆದುರಿಗಿದೆ ಎಂದು ಲೇಖಕ ಸುನೀಲ್ ಬಾರ್ಕೂರ್ ತಿಳಿಸಿದರು.ಹೊಸ ವಿಷಯಗಳ ಪರಿಚಯ ನೀಡುವ ಪುಸ್ತಕಗಳು ಕನ್ನಡದಲ್ಲಿ ಹೆಚ್ಚು ಸಂಖ್ಯೆಯಲ್ಲಿಲ್ಲ. ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳಲ್ಲಂತೂ ಈ ಸಂಖ್ಯೆ ಇನ್ನೂ ಕಡಿಮೆ. ಅಂತಹ ಮಾಹಿತಿ ಸದಾ ಸಿಗುವಂತಾಗಬೇಕು, ಅದಕ್ಕಾಗಿ ಹೊಸ ಸಂವಹನಕಾರರು ಸಿದ್ಧರಾಗಬೇಕು, " ಎಂದು ಹಿರಿಯ ವಿಜ್ಞಾನ ಸಂವಹನಕಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟರು.ಅಂಕಣಕಾರ ಟಿ.ಜಿ. ಶ್ರೀನಿಧಿ ಮಾತನಾಡಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಪರಂಪರೆ ಸಮೃದ್ಧವಾಗಿದ್ದು ಶತಮಾನಕ್ಕೂ ಹೆಚ್ಚಿನ ಸಮಯದಿಂದ ಪುಸ್ತಕಗಳು, ಪತ್ರಿಕೆಗಳು, ಲೇಖನಗಳು ಪ್ರಕಟವಾಗುತ್ತಿವೆ. ವಿಜ್ಞಾನ-ತಂತ್ರಜ್ಞಾನದ ಜಗತ್ತಿಗೆ ಕಿಟಕಿ ತೆರೆಯುವ ಕೆಲಸವನ್ನೂ ಮಾಡುತ್ತಿವೆ. ಹಿಂದಿನ ವಿಜ್ಞಾನ ಸಂವಹನಕಾರರು ನಮ್ಮನ್ನು ಪ್ರೇರೇಪಿಸಿದಂತೆ ನಾವೂ ಮುಂದಿನ ತಲೆಮಾರಿನಲ್ಲಿ ಈ ಕ್ಷೇತ್ರದ ಕುರಿತು ಆಸಕ್ತಿ ಮೂಡಿಸಬೇಕಿದೆ ಎಂದು ಹೇಳಿದರು.
ಬುಕ್ಸ್ ಲೋಕ ಪ್ರಕಾಶನದ ಫಣೀಶ್, ಸಾಗರ ಸಂಗಮದ ರವಿರಾಮ್ ಸಾಗರ, ಪ್ರಶಾಂತ್ ಮತ್ತಿತರರು ಇದ್ದರು. ವಿಜ್ಞಾನಿ-ಲೇಖಕಿ ಡಾ. ದೀಪಾ ಕಾರ್ಯಕ್ರಮ ನಿರ್ವಹಿಸಿದರು.