ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಹರಿಹರ ತಾಲೂಕಿನ ಒಟ್ಟು ಹತ್ತು ಶಾಲೆಗಳಿಗೆ ಹತ್ತು ಲಕ್ಷ ರು. ಮೌಲ್ಯದ ಬೀರುಗಳ ಸಹಿತ ವಿಜ್ಞಾನ ವಿಷಯದ ಪ್ರಯೋಗಾಲಯ ಉಪಕರಣಗಳನ್ನು ನೀಡಲಾಗಿದೆ, ಆ ಕಾರಣಕ್ಕಾಗಿ ಬಡ ಮಕ್ಕಳ ಸಂಸತ ಕಂಡು ಉತ್ಸಾಹ ದುಪ್ಪಟ್ಟಾಗಿದೆ ಎಂದು ಬೆಂಗಳೂರಿನ ಕೃತಗ್ಯತಾ ಟ್ರಸ್ಟ್ ಮುಖ್ಯಸ್ಥೆ ಅರುಣಾ ದಿವಾಕರ್ ಹೇಳಿದರು.ಸಮೀಪದ ದೇವರಬೆಳಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಉಪಕರಣಗಳನ್ನು ಮುಖ್ಯ ಶಿಕ್ಷಕಿ ಭಾಗ್ಯಜ್ಯೋತಿಯವರಿಗೆ ಹಸ್ತಾಂತರಿಸಿ ಮಾತನಾಡಿ, ಮಕ್ಕಳು ಪ್ರತಿ ವಿಷಯವನ್ನು ಕುತೂಹಲದಿಂದ ಆಲಿಸಬೇಕು, ವಿಜ್ಞಾನ ವಿಷಯದಲ್ಲಿ ವಿಜ್ಞಾನಿಗಳ ಬಗ್ಗೆ ಹೆಚ್ಚು ಮಾಹಿತಿ ಇಳಿಯಬೇಕು, ಆಟ ಮತ್ತು ಪಾಠದಲ್ಲಿ ನಿಮಗೆ ಯೋಚನೆ ಬಂದ ವಿಷಯದಲ್ಲಿ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಪ್ರಯೋಗ ನಡೆಸಬೇಕು, ಉಪಕರಣಗಳನ್ನು ಹಾಳು ಮಾಡದೇ ಮನೆ ವಸ್ತುಗಳಂತೆ ಬಳಸಬೇಕು ಎಂದು ಕರೆ ನೀಡಿದ ಅರುಣಾ ಬಣ್ಣ ಬಣ್ಣದ ಚಿಟ್ಟೆಯಂತಾಗಲು ಪರಿಶ್ರಮ ಹಾಕಬೇಕು. ಆಗ ಫಲ ದೊರಕುತ್ತದೆ ಎಂದರು.
ಮುಖ್ಯ ಶಿಕ್ಷಕ ಆರ್ ಮಠ ಮಾತನಾಡಿ, ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಬ್ಬಿಣದ ಕಡಲೆ ಎಂದು ತಿಳಿಯದೇ ಆಸಕ್ತಿ ವಿಷಯಗಳೆಂದು ಭಾವಿಸಬೇಕು. ವರ್ಷದ ಫಲಕ್ಕೆ ಹಣ್ಣಿನ ಸಸಿ, ನಿರಂತರ ಫಲ ನೀಡಲು ಮರಗಳಾಗುವ ಸಸಿ ನೆಡಬೇಕು. ಹಾಗೆ ಭವಿಷ್ಯದ ಮರಗಳಾಗಿ ಗ್ರಾಮ ಮತ್ತು ಪೋಷಕರಿಗೆ ಕೀರ್ತಿ ತನ್ನಿ ಎಂದು ಕರೆ ನೀಡಿದರು.ನಂದಿತಾವರೆ ಶಾಲಾ ಶಿಕ್ಷಕ ಮಂಜಪ್ಪ ಬಿದರಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಪಡೆಯಲು ಆಸಕ್ತಿ ಮೂಡಬೇಕು, ಆಸಕ್ತಿ ಇದ್ದಾಗ ಪ್ರಶ್ನೆ ಕೇಳುವ ಮನೋಭಾವ ಬರುತ್ತದೆ. ಯಾವುದೇ ಉಪಾಧ್ಯಾಯರನ್ನು ಪ್ರಶ್ನೆ ಮಾಡಿ ಉತ್ತರ ಪಡೆಯಿರಿ, ಆಗ ಅನುಮಾನ ಇರೋದಿಲ್ಲ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಜ್ಯೋತಿ, ಶಿಕ್ಷಕ ಸಂಘಟನೆಗಳ ಪದಾಧಿಕಾರಿ ರಾಘವೇಂದ್ರ, ಶಿವಾನಂದಪ್ಪ, ವಿವಿಧ ವಿಷಯಗಳ ಬೋಧಕರಾದ ಕರಡಿ ಪ್ರಕಾಶ್, ರಶ್ಮಿ, ಆಯಿಷಾ ಸಿದ್ದಿಕಾ, ಗಿರಿಜಮ್ಮ, ವೀಣಾ,ವಿಮಲಾ, ಶಂಕ್ರಮ್ಮ ಹುಲ್ಮನಿ ಮತ್ತಿತರರು ಇದ್ದರು.