ಗದಗ: ಮಕ್ಕಳಲ್ಲಿನ ಸಹಜ, ಸೂಕ್ತವಾಗಿರುವ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಅವಕಾಶ ಮುಖ್ಯ. ನಿಸರ್ಗದ ಸತ್ಯಾಂಶಗಳನ್ನು ಕಂಡುಹಿಡಿಯುವುದೆ ವಿಜ್ಞಾನ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಜೆಟಿ ಪಪೂ ಮಹಾವಿದ್ಯಾಲಯದಲ್ಲಿ ನಡೆದ ಅಂತರ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಾಣಿಜ್ಯ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಂದು ವಿಷಯದಲ್ಲಿ ವೈಜ್ಞಾನಿಕ ಅಧ್ಯಯನ ಮುಖ್ಯ. ತಂತ್ರಜ್ಞಾನದ ಬಳಕೆಯಿಂದ ಜಗತ್ತು ಅಂಗೈಯಲ್ಲಿದೆ. ಹೋಟೆಲ್ ಉದ್ಯಮ, ಆರೋಗ್ಯ, ಕೈಗಾರಿಕಾ ಕ್ಷೇತ್ರ ಅನೇಕ ಹಂತಗಳಲ್ಲಿ ವಿಜ್ಞಾನದ ಬಳಕೆ ಮುಂದುವರಿದಿದೆ. ಆದರೂ ಮೂಢನಂಬಿಕೆಗಳನ್ನು ಬಿಟ್ಟಲ್ಲವೆಂಬುದು ವಿಷಾದದ ಸಂಗತಿ ಎಂದರು.
ವಿಜ್ಞಾನದ ಜತೆಗೆ ಸ್ವಚ್ಛತೆ ಮುಖ್ಯ. ಆರೋಗ್ಯಕ್ಕೆ ಮೂಲ ಮಂತ್ರವೇ ಸ್ವಚ್ಛತೆ. ಶೂಶ್ರುತ ಎಂಬ ಮುನಿ 2900 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ ಕಂಡುಹಿಡಿದರು. ಜಗದೀಶ ಚಂದ್ರಬೋಸ್ ವೈರ್‌ಲೆಸ್ ಶೋಧಿಸಿದರು. ಇಂದಿನ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿ ನಾವಿಲ್ಲ ಎನ್ನುವುದು ನೋವಿನ ಸಂಗತಿ. ಹಾಗಾಗಿ ಮುಂಬರುವ ದಿನಮಾನಗಳಲ್ಲಿ ಮುಂದಿನ ಪೀಳಿಗೆ ಭಾರತವನ್ನು ಅಗ್ರಸ್ಥಾನಕ್ಕೆ ತಂದು ನಿಲ್ಲಿಸಬೇಕೆಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಎಲ್ಲಿ ವಿಜ್ಞಾನ ನಿಲ್ಲುತ್ತದೆಯೋ ಅಲ್ಲಿಂದ ಅಧ್ಯಾತ್ಮ ಪ್ರಾರಂಭವಾಗುತ್ತದೆ. ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ವಿಗಾಗಿ ಪ್ರಯತ್ನಿಸದೆ ತಮ್ಮನ್ನು ತಾವು ಸಮರ್ಥರನ್ನಾಗಿಸಲು ಪ್ರಯತ್ನಿಸಬೇಕು ಎಂದರು.
ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ಲೆಕ್ಕಪತ್ರಗಳು ಮೊದಲು ಮಗ್ಗಿಗಳ ಸಹಾಯದಿಂದ ಮಾಡಲ್ಪಡುತ್ತಿದ್ದವು. ವಿಜ್ಞಾನ ಬೆಳದಂತೆಲ್ಲ ಇಂದು ಕ್ಯಾಲ್ಕುಲೇಟರ್ ಮತ್ತು ಗಣಕಯಂತ್ರದ ಸಹಾಯದಿಂದ ಕಾರ್ಯಗಳು ಸುಲಭವಾಗಿವೆ. ಇತ್ತೀಚಿನ ಅಂತರ್ಜಾಲಗಳ ವ್ಯವಹಾರದಿಂದ ವಿಜ್ಞಾನ, ವಾಣಿಜ್ಯ ಕ್ಷೇತ್ರಗಳ ಕ್ಷೀಪ್ರ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.ಈ ವೇಳೆ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ವೀರೇಶ ಕೂಗು, ಈಶಣ್ಣ ಮುನವಳಿ, ಪ್ರಾ. ಪ್ರೊ. ಪಿ.ಜಿ. ಪಾಟೀಲ, ಆರ್.ಎಲ್. ಭಜಂತ್ರಿ, ಪ್ರೊ. ಮಧುಮತಿ ವಾಲಿ ಇತರರು ಇದ್ದರು. ಪ್ರೊ. ಎಸ್.ಬಿ. ಹಾವೇರಿ ಸ್ವಾಗತಿಸಿದರು. ಸೌಮ್ಯ ಹಿರೇಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ನೇತ್ರಾವತಿ ನಾಗಲೊಟಿಮಠ, ಪ್ರೊ. ಸೌಭಾಗ್ಯ ಹಿರೇಮಠ ನಿರೂಪಿಸಿದರು. ಪ್ರೊ. ರಾಜೇಶ್ವರಿ ರಾಜೂರ ವಂದಿಸಿದರು.