ರೋಗಬಾಧಿತ ಜೋಳದ ಬೆಳೆ ಪರಿಶೀಲಿಸಿದ ವಿಜ್ಞಾನಿಗಳು

KannadaprabhaNewsNetwork |  
Published : Jun 22, 2025, 01:18 AM IST
ರೋಗಬಾಧೆ ಜೋಳದ ಬೆಳೆ ಹೊಲಕ್ಕೆ ವಿಜ್ಞಾನಿಗಳ ತಂಡ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಮುಸುಕಿನ ಜೋಳ ಬೆಳೆಗೆ ರೋಗಬಾಧೆ ಉಂಟಾಗಿರುವುದರಿಂದ ಕೃಷಿ ವಿಜ್ಞಾನಿಗಳಾದ ಡಾ. ಪಿ. ಮಹದೇವ್, ಡಾ. ಎನ್. ಮಲ್ಲಿಕಾರ್ಜುನ ಹಾಗೂ ಡಾ. ಬಿ.ಎಸ್ ಬಸವರಾಜು ತಂಡವು, ವಿವಿಧ ತಾಲೂಕುಗಳಲ್ಲಿ ರೋಗಬಾಧಿತ ಗಿಡಗಳ ಮಾದರಿಗಳು ಮತ್ತು ಮಣ್ಣಿನ ಮಾದರಿಗಳನ್ನು ಪಡೆದರು. ಶೀಲೀಂದ್ರ ನಾಶಕವಾದ ಮೆಟಲಾಕ್ಸಿಲ್ -ಒ 4% ಮ್ಯಾಂಕೋಜೆಬ್ 65% WPಅನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ.ನಂತೆ ಬಿತ್ತನೆಯಾದ 28 ದಿನಗಳ ನಂತರ ಬೆಳೆಗಳಿಗೆ ಸಿಂಪಡಿಸಬೇಕು ಎಂದು ಶಿಫಾರಸು ಮಾಡಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನಲ್ಲಿ ಬೆಳೆದಿರುವ ಮುಸುಕಿನ ಜೋಳ ಬೆಳೆಗೆ ರೋಗಬಾಧೆ ಉಂಟಾಗಿರುವುದರಿಂದ ಕೃಷಿ ವಿಜ್ಞಾನಿಗಳಾದ ಡಾ. ಪಿ. ಮಹದೇವ್, ಡಾ. ಎನ್. ಮಲ್ಲಿಕಾರ್ಜುನ ಹಾಗೂ ಡಾ. ಬಿ.ಎಸ್ ಬಸವರಾಜು ತಂಡವು, ವಿವಿಧ ತಾಲೂಕುಗಳಲ್ಲಿ ರೋಗಬಾಧಿತ ಗಿಡಗಳ ಮಾದರಿಗಳು ಮತ್ತು ಮಣ್ಣಿನ ಮಾದರಿಗಳನ್ನು ಪಡೆದರು.

ಪ್ರಸಕ್ತ ಸಾಲಿನಲ್ಲಿ ಮುಸುಕಿನ ಜೋಳದಲ್ಲಿ ಕೇದಿಗೆ ರೋಗ/ಬಿಳಿ ಸುಳಿ ರೋಗ (ಶೀಲೀಂದ್ರ ರೋಗ) ಹೆಚ್ಚಾಗಿ ಕಂಡುಬರುತ್ತಿದ್ದು, ಬಿತ್ತನೆಯಾದ 15 ದಿನಗಳ ಬೆಳೆಯಲ್ಲಿ ಕಂಡುಬರುತ್ತಿದೆ. ಈ ರೋಗದ ಬಾಧೆಯ ಕುರಿತು ಅಧ್ಯಯನ ನಡೆಸಲು ಕೃಷಿ ವಿಜ್ಞಾನಿಗಳ ಅಧಿಕಾರಿಗಳ ತಂಡ ತಾಲೂಕಿನ ಕಸಬಾ ಹೋಬಳಿಯ ಹೊಸಪುರ, ಮುದಿಗೆರೆ ಗ್ರಾಮಗಳಲ್ಲಿ ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ರೋಗ ನಿರ್ವಹಣೆಗಾಗಿ ಪ್ರತಿ ವರ್ಷಾರಂಭದಲ್ಲಿ ಆಳವಾದ ಮಾಗಿ ಉಳುಮೆ ಮಾಡುವುದು. ಪ್ರತಿ ವರ್ಷ /ಪ್ರತಿ ಹಂಗಾಮಿಗೆ ದ್ವಿದಳ ಧಾನ್ಯದ ಬೆಳೆಗಳಾದ ತೊಗರಿ, ಅಲಸಂದೆ, ಉದ್ದು, ಅವರೆ, ಆಥವಾ ಇತರೆ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡುವುದು. ರೋಗ ಲಕ್ಷಣ ಕಂಡುಬᴏದ ಗಿಡಗಳನ್ನು ರೋಗಬಾಧೆ ಆವರಿಸಿದ ತಕ್ಷಣ ಬೇರು ಸಹಿತ ಕಿತ್ತು ಹಾಕುವುದು. ಪ್ರತಿ ಸಾಲಿನಿಂದ ಸಾಲಿಗೆ 60 ಸೆಂ.ಮೀ ಮತ್ತು ಗಿಡದಿಂದ ಗಿಡಕ್ಕೆ 28 ಸೆ.ಮೀ. ಅಂತರದೊᴏದಿಗೆ ಬಿತ್ತನೆ ಮಾಡಬೇಕು. ಬಿತ್ತನೆಗೆ ಬಳಸುವ ಬೀಜಗಳನ್ನು ಮೆಟಲಾಕ್ಸಿಲ್- ಒ 4% ಶೀಲೀಂದ್ರ ನಾಶಕಕ್ಕೆ ಪ್ರತಿ ಕೆ.ಜಿ.ಗೆ 4 ಗ್ರಾಂನಂತೆ ಬೀಜೋಪಚಾರ ಮಾಡಬೇಕು. ಶೀಲೀಂದ್ರ ನಾಶಕವಾದ ಮೆಟಲಾಕ್ಸಿಲ್ -ಒ 4%+ಮ್ಯಾಂಕೋಜೆಬ್ 65% WPಅನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ.ನಂತೆ ಬಿತ್ತನೆಯಾದ 28 ದಿನಗಳ ನಂತರ ಬೆಳೆಗಳಿಗೆ ಸಿಂಪಡಿಸಬೇಕು ಎಂದು ಶಿಫಾರಸು ಮಾಡಿದರು.ಆಲೂರು ತಾಲೂಕಿನಲ್ಲಿ ಮುಸುಕಿನ ಜೋಳವನ್ನು ಅತಿ ಹೆಚ್ಚು ರೈತರು ಏಕ ಬೆಳೆಯಾಗಿ ಅಂದರೆ ಕಳೆದ 4-5 ವರ್ಷಗಳಿಂದ ಒಂದೇ ತಾಕಿನಲ್ಲಿ ಮುಸುಕಿನ ಜೋಳವನ್ನು ಪ್ರತಿ ವರ್ಷ ಬೆಳೆಯುತ್ತಿರುವುದು ರೋಗದ ತೀವ್ರತೆಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ತಂಪಾದ ವಾತಾವರಣವು ರೋಗದ ಉಲ್ಬಣಕ್ಕೆ ಸಹಕಾರಿಯಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಕಲೇಶಪುರ ಉಪ ಕೃಷಿ ನಿರ್ದೇಶಕರು ಕೋಕಿಲಾ ಎ.ಎಸ್ ಆಲೂರು ಮತ್ತು ಹಾಸನ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರುಗಳಾದ ರಮೇಶ್ ಕುಮಾರ್ ಕೆ.ಎಚ್, ಮತ್ತು ಮನು ಎಂ. ಡಿ ಉಪಸ್ಥಿತರಿದ್ದರು. ಕೃಷಿ ಅಧಿಕಾರಿಗಳಾದ ಸಂಗೀತಾ ಕೆ.ಆರ್‌, ನವೀನ್ ಕುಮಾರ್ ಹಾಗೂ ಮಾಂತೇಶ್ ಸೊರಟೂರ ಮತ್ತು ರೈತರಾದ ಧರ್ಮರಾಜು, ಪದ್ಮರಾಜು, ಜವರಯ್ಯ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!