ಬೆಳಗ್ಗೆಯಿಂದಲೇ ಬಿರುಬಿಸಿಲು, ರಾತ್ರಿ ತಂಪು!

KannadaprabhaNewsNetwork |  
Published : Oct 15, 2026, 02:30 AM IST
ಸಾಂದರ್ಭಿಕ ಎಐ ಚಿತ್ರ. | Kannada Prabha

ಸಾರಾಂಶ

ಹಗಲಿನ ಸೆಕೆಗೆ ಹೋಲಿಸಿದರೆ ರಾತ್ರಿ ಹೊತ್ತಿನಲ್ಲಿ ವಾತಾವರಣ ತಂಪಾಗುತ್ತಿರುವ ಅನುಭವ ಕಂಡುಬರುತ್ತಿದೆ. ಅದರಲ್ಲಿಯೂ ಅರಣ್ಯ ಹೆಚ್ಚಿರುವ ಪ್ರದೇಶದಲ್ಲಿ ಮನೆಯ ಸಮೀಪ ರಾತ್ರಿಯ ಅವಧಿಯಲ್ಲಿ ತಂಪಿನ ವಾತಾವರಣ ನೀಡುತ್ತಿದೆ. ಇದು ಹಿತ ಎನಿಸಿದರೂ ನೆಗಡಿಯಂತಹ ರೋಗಗಳು ಹೆಚ್ಚಾಗುತ್ತಲಿದೆ.

ಪ್ರಸಾದ್ ನಗರೆ

ಹೊನ್ನಾವರ: ತಾಲೂಕಿನಲ್ಲಿ ಅಕ್ಟೋಬರ್ ತಿಂಗಳ ಹವಾಮಾನ ದಿನದಿಂದ ದಿನಕ್ಕೆ ವಿಭಿನ್ನ ಅನುಭವ ನೀಡುತ್ತಿದೆ. ಬೆಳಗ್ಗೆ ಸೂರ್ಯನ ಬಿಸಿಲು ಏರುತ್ತಿದ್ದಂತೆ ಸೆಕೆಯ ಅನುಭವ ಹೆಚ್ಚಾದರೆ, ರಾತ್ರಿ ಹೊತ್ತಿಗೆ ವಾತಾವರಣ ತಂಪಾಗುತ್ತಿರುವುದು ವಿಶೇಷವಾಗಿದೆ. ಅ.12 ರಂದು 70 ವರ್ಷಗಳ ಬಳಿಕ ಗರಿಷ್ಠ ದಾಖಲೆಯ ಉಷ್ಣಾಂಶ ದಾಖಲಾಗಿದೆ.ಮುಂಜಾನೆ ವೇಳೆಯಲ್ಲಿ ಹಿತಕರವೆನಿಸುವ ವಾತಾವರಣ, ಸೂರ್ಯ ಮೇಲೇರಿದಂತೆ ಬಿಸಿಲಿನ ಝಳಕ್ಕೆ ತಿರುಗುತ್ತದೆ. ಬೆಳಗ್ಗೆ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ಹೊರಾಂಗಣದಲ್ಲಿ ದುಡಿಯುವವರು ಬಿಸಿಲಿನ ತೀವ್ರತೆಯನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ಪ್ರಖರತೆ ತುಂಬಾ ಹೆಚ್ಚುವುದರಿಂದ ನೆರಳನ್ನು ಆಶ್ರಯಿಸುವಂತಾಗಿದೆ.

ಅ. 12ರಂದು 36.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಇದು ಅಕ್ಟೋಬರ್ ತಿಂಗಳಿನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಪೈಕಿ ಹೊನ್ನಾವರದ ಇತಿಹಾಸದಲ್ಲಿ ಎರಡನೇ ಬಾರಿ ಆಗಿದೆ. ಈ ಹಿಂದೆ 1957ರಲ್ಲಿ ಅ. 15ರಂದು 36.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಅಂದರೆ 70 ವರ್ಷದ ಬಳಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ.ರಾತ್ರಿ ಹೊತ್ತಿಗೆ ತಂಪಿನ ಅನುಭವ: ಹಗಲಿನ ಸೆಕೆಗೆ ಹೋಲಿಸಿದರೆ ರಾತ್ರಿ ಹೊತ್ತಿನಲ್ಲಿ ವಾತಾವರಣ ತಂಪಾಗುತ್ತಿರುವ ಅನುಭವ ಕಂಡುಬರುತ್ತಿದೆ. ಅದರಲ್ಲಿಯೂ ಅರಣ್ಯ ಹೆಚ್ಚಿರುವ ಪ್ರದೇಶದಲ್ಲಿ ಮನೆಯ ಸಮೀಪ ರಾತ್ರಿಯ ಅವಧಿಯಲ್ಲಿ ತಂಪಿನ ವಾತಾವರಣ ನೀಡುತ್ತಿದೆ. ಇದು ಹಿತ ಎನಿಸಿದರೂ ನೆಗಡಿಯಂತಹ ರೋಗಗಳು ಹೆಚ್ಚಾಗುತ್ತಲಿದೆ.ಬದಲಾವಣೆಗೆ ಕಾರಣ: ಸೂರ್ಯನ ಕಿರಣಗಳ ತೀವ್ರತೆ, ಮೋಡಗಳ ಪ್ರಮಾಣ, ಗಾಳಿಯ ಚಲನೆ, ತೇವಾಂಶ ಹಾಗೂ ಭೂಮಿಯ ಮೇಲ್ಮೈಯಿಂದ ಉಷ್ಣ ಹೊರಸೂಸುವಿಕೆ ಮುಂತಾದ ಅಂಶಗಳು ಹಗಲು ಮತ್ತು ರಾತ್ರಿಯ ತಾಪಮಾನದಲ್ಲಿ ವ್ಯತ್ಯಾಸ ಉಂಟುಮಾಡುತ್ತಿದೆ. ಕರಾವಳಿ ಪ್ರದೇಶದಲ್ಲಿ ಸಮುದ್ರದ ಪ್ರಭಾವವೂ ಸ್ಥಳೀಯ ಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿದ ಅ. 13ರ ವರದಿಯಲ್ಲಿ ಹೊನ್ನಾವರದ ಕನಿಷ್ಠ ತಾಪಮಾನ 22.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅ. 14 ಮತ್ತು 15ರಂದು ಗರಿಷ್ಠ 34 ಡಿಗ್ರಿ ಹಾಗೂ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಸಾಧ್ಯತೆಯನ್ನು ಇಲಾಖೆ ಮುನ್ಸೂಚಿಸಿತ್ತು. ಇದರಿಂದ ಹಗಲಿನ ಬಿಸಿಲು ಮತ್ತು ರಾತ್ರಿಯ ತುಸು ಕಡಿಮೆ ತಾಪಮಾನದ ನಡುವಿನ ವ್ಯತ್ಯಾಸವನ್ನು ಗಮನಿಸಬಹುದಾಗಿದೆ. 36 - 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮಾರ್ಚ್ ತಿಂಗಳಿನಲ್ಲಿ ದಾಖಲಾಗಬೇಕು. ಆದರೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗುತ್ತಿರುವುದು ಎಲ್ ನಿನೋ ಪರಿಣಾಮವಾಗಿದೆ.ಆರೋಗ್ಯದ ಕಡೆಗೂ ಇರಲಿ ಗಮನ: ಬೆಳಗಿನ ಮತ್ತು ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ತೆರಳುವವರು ಸಾಕಷ್ಟು ನೀರು ಕುಡಿಯಬೇಕು. ಸಾಧ್ಯವಾದಷ್ಟು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ದೀರ್ಘಕಾಲ ದುಡಿಯುವುದನ್ನು ತಪ್ಪಿಸಬೇಕು. ರಾತ್ರಿ ತಂಪಿನ ಅನುಭವವಾದರೂ ಹವಾಮಾನಕ್ಕೆ ಅನುಗುಣವಾಗಿ ಉಡುಪು ಧರಿಸುವುದು ಉತ್ತಮ.

ಹಿಂಗಾರು ಮಳೆ: ಮುಂಗಾರು ಮುಗಿದಿದೆ. ಚೆನ್ನೈನಲ್ಲಿ ಗಾಳಿ ಪ್ರಮಾಣ ಹೆಚ್ಚಾದರೆ ಹಿಂಗಾರು ಮಳೆ ಬರಬಹುದು. ಆ ಮಳೆಯೂ ನಿರಂತರವಾಗಿರುವುದಿಲ್ಲ. ಒಂದು ದಿನ ಬಂದು ನಾಲ್ಕು ದಿನ ಬರದೇ ಇರಬಹುದು. ತಾಲೂಕಿನ ವಾತಾವರಣದಲ್ಲಿ ಒತ್ತಡ ಹೆಚ್ಚಾಗಿರುವುದರಿಂದ ಸೆಕೆ ಹೆಚ್ಚಿದೆ. ಅರಣ್ಯ ಇರುವೆಡೆಯಲ್ಲಿ ರಾತ್ರಿ ಚಳಿಯ ಅನುಭವ ಆಗುತ್ತಿದೆ. ರಾತ್ರಿಯ ವೇಳೆ ಒತ್ತಡ ಕಡಿಮೆ ಇರುತ್ತದೆ. ಮಳೆಯ ತೀವ್ರ ಅಭಾವ ಇರುವುದರಿಂದ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಅಭಾವ ಉಂಟಾಗಲಿದೆ ಎಂದು ತಾಲೂಕು ಹವಾಮಾನಾಧಿಕಾರಿ ರಮೇಶ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ಪರಿಚಯಿಸಿ: ಸುರೇಶ್ ನಂಜಪ್ಪ
ಎನ್‌ಡಿಎ ಪರೀಕ್ಷೆ: ಎಕ್ಸ್‌ಪರ್ಟ್‌ನ ೪೧ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಬಿ ಅರ್ಹತೆ