ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ತಲುಪುವ ಕೆಲಸ ಮಾಡಬೇಕು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಪರಿಷತ್ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೂ 5000 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಡಿ ನೋಂದಣಿಯಾಗಿದ್ದಾರೆ. ಸದರಿ ಸಾಲಿನಲ್ಲಿ 8000 ತಲುಪುವ ಗುರಿ ನಿಗದಿ ಮಾಡಿಕೊಳ್ಳಿ ಎಂದರು.
ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮಹತ್ವದ ಕುರಿತು ಶಾಲಾ ಶಿಕ್ಷಕರು ತಿಳಿಸಬೇಕು. ಬದುಕಿನಲ್ಲಿ ಶಿಸ್ತು ರೂಪಿಸಿಕೊಳ್ಳಲು ಸಮಾಜ ಸೇವೆ, ದೇಶ ಪ್ರೇಮದಂತಹ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ ಅಂಡ್ ಗೈಡ್ಸ್ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಅಧಿಕಾರಿಗಳು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮಹತ್ವದ ಕುರಿತು ಜಾಗೃತಿ ಮೂಡಿಸಲು ಅನುದಾನದ ಅವಶ್ಯಕತೆ ಇದೆ. ತಾಲೂಕು, ಗ್ರಾಮ ಪಂಚಾಯ್ತಿಗಳಿಂದ ಅನುದಾನ ಕ್ರೋಡ್ರೀಕರಿಸಿ ಇದರೊಂದಿಗೆ ದಾನಿಗಳನ್ನು ಸಂಪರ್ಕಿಸಿ ಆರ್ಥಿಕವಾಗಿ ಸದೃಢವಾದರೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದರು.
ಜಿಲ್ಲಾ ಮಟ್ಟ ಹೊರತು ಪಡಿಸಿ ತಾಲೂಕು ಮಟ್ಟದಲ್ಲೂ ಸಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಸಕ್ತ ಮಕ್ಕಳಿಗೆ ತರಬೇತಿ ನೀಡಬೇಕು. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳು ಸಮಾಜ ಸೇವಾ ಕೆಲಸದಲ್ಲಿ ತೊಡಗಿಕೊಂಡರೆ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಾರೆ ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಮಂಡ್ಯ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಗೆ ಮಹಾಪೋಷಕರಾಗಿ ನೇಮಕ ಮಾಡಿಕೊಂಡಿದ್ದು, ಇದು ಹೆಚ್ಚಿನ ಬಲ ತುಂಬಲಿದೆ ಎಂದು ಹೇಳಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚಲುವಯ್ಯ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಆಯುಕ್ತ ಜಿ.ಪಿ. ಭಕ್ತವತ್ಸಲ ಸೇರಿದಂತೆ ಇನ್ನಿತರ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಮುಖ್ಯಸ್ಥರು ಉಪಸ್ಥಿತರಿದ್ದರು.