ಲೀಡ್‌.. ವಡಗೇರಾದಲ್ಲಿ ಕುಡಿವ ನೀರಿಗಾಗಿ ಪರದಾಟ

KannadaprabhaNewsNetwork |  
Published : Nov 14, 2023, 01:16 AM IST
ವಡಗೇರಾ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆ ಜನರು ಸ್ಮಶಾನದಲ್ಲಿರುವ ಬೋರವೆಲ್ ನೀರನ್ನು ಬಳಸುತ್ತಿರುವುದು. | Kannada Prabha

ಸಾರಾಂಶ

ಬೋರವೆಲ್ ಇದ್ದರೂ ಕುಡಿಯಲು ನೀರು ಯೋಗ್ಯವಾಗಿಲ್ಲ ಸ್ಮಶಾನದ ಬೋರವೆಲ್ ನೀರೆ ಸಾರ್ವಜನಿಕರಿಗೆ ಆಸರೆತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಹೋರಾಟ

ಕನ್ನಡಪ್ರಭ ವಾರ್ತೆ ಯಾದಗಿರಿ

ವಡಗೇರಾ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಎರಡು ಕಿಮೀ ಕ್ರಮಿಸಿ ನೀರು ತರುವ ಪರಿಸ್ಥಿತಿ ಎದುರಾಗಿದ್ದು, ಜನರು ಆಕ್ರೋಶ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣವು ಸುಮಾರು 10 ಸಾವಿರ ಜನಸಂಖ್ಯೆ ಹೊಂದಿದೆ. ಕೆಲ ಬಡವಾಣೆಗಳಲ್ಲಿ ನೀರು ಸರಬರಾಜಿಲ್ಲ. ಬೋರವೆಲ್‌ಗಳಿದ್ದರೂ ನಿರ್ವಹಣೆ ಇಲ್ಲದೆ ಕೆಟ್ಟುನಿಂತಿವೆ. ಕೆಲ ಬೋರವೆಲ್‌ ನೀರು ಬಳಕೆಗೆ ಯೋಗ್ಯವಿಲ್ಲ. ಎರಡು ಕಿಮೀ ದೂರದ ಮುಸ್ಲಿಂ ಸ್ಮಶಾನದಲ್ಲಿರುವ ಬೋರವೆಲ್ ಆಸರೆಯಾಗಿದೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.

ಸ್ವಾಮಿ ವಿವೇಕಾನಂದ ಶಾಲೆ ಹತ್ತಿರದ ಬೋರವೆಲ್‌ಗೆ ಹೋಗಿ ದಿನನಿತ್ಯ ಸೈಕಲ್ ಮತ್ತು ನಡೆದುಕೊಂಡು ನೀರು ತರಬೇಕು. ನಳದಲ್ಲಿ ಎರಡ್ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತದೆ. ಈ ಬಗ್ಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಜನ.

ಕಂದಳ್ಳಿಯ ಭೀಮಾನದಿ ನೀರು ಸಂಪೂರ್ಣ ಕಲುಷಿತವಾಗಿದೆ. ಒಂದು ದಶಕದಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲದೆ ಬೇಸಿಗೆ ಸಮೀಪಿಸುತ್ತಿದ್ದು, ನೀರಿಗಾಗಿ ಇನ್ನಷ್ಟು ಹಾಹಾಕಾರ ಉಂಟಾಗಬಹುದು. ತುಮಕೂರು ಗ್ರಾಮದ ಕೃಷ್ಣಾ ನದಿಯಿಂದ ನೀರು ಹರಿಸಿದಾಗ ಮಾತ್ರ ಸಾರ್ವಜನಿಕರಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಇಲ್ಲಿನ ಜನರ ಒತ್ತಾಯವಾಗಿದೆ.

ಸಮಸ್ಯೆ ಬಗೆಹರಿಸದಿದ್ದರೆ ಸಾರ್ವಜನಿಕರು ಹಾಗೂ ಸಂಘಟನೆಯಿಂದ ವಡಗೇರಾ ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ತಾಲೂಕು ಗೌರವಾಧ್ಯಕ್ಷ ಶರಣು ಜಡಿ ಎಚ್ಚರಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ