ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಸತ್ಯಮಂಗಲ ರಸ್ತೆಯ ಸುಲ್ತಾನ್ ಷರೀಪ್ ವೃತ್ತದಲ್ಲಿ ಸಮಾವೇಶಗೊಂಡ ಎಸ್‌ಐಆರ್ ವಿರೋಧಿ, ಜಾತ್ಯತೀತ ಪಕ್ಷಗಳು, ಜನಪರ ಸಂಘಟನೆಗಳ ಒಕ್ಕೂಟದ ಮುಖಂಡರು ಕೇಂದ್ರ ಸರ್ಕಾರ, ದೇಶದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ ಘೋಷಣೆ ಕೂಗಿದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ ಮೂಲಕ ತ್ರಿವರ್ಣ ಧ್ವಜ ಹಿಡಿದುಕೊಂಡು, ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡು, ಕೆಲಕಾಲ ಪ್ರತಿಭಟನೆ ನಡೆಸಿದರು.
ಪಿಯುಸಿಎಲ್ ರಾಜ್ಯ ಕಾರ್ಯದರ್ಶಿ ಕೆ.ವೆಂಕಟರಾಜು ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಬಿಕ್ಕಟ್ಟಿನಲ್ಲಿದ್ದು, ಚುನಾವಣಾ ಪ್ರಕ್ರಿಯೆಯನ್ನು ಅಪಹರಿಸಲಾಗಿದೆ. ಚುನಾವಣಾ ಆಯೋಗವನ್ನು ಮೋದಿ ಕಾನೂನಿಗೂ ಮೀರಿದಂತೆ ಮಾಡಿಕೊಳ್ಳುವ ಮೂಲಕ ಅಧಿಕಾರ ಪಡೆದುಕೊಂಡಿದ್ದಾರೆ ಎಂದರು.ಗೃಹಸಚಿವ ಅಮಿತ್ ಶಾ ದುರ್ಬಳಕೆ ಪಡೆಯಲು ಹೊಂಚು ಹಾಕುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ನಿಲ್ಲಿಸುವ ತನಕ ಹೋರಾಟ ಮಾಡಬೇಕಿದೆ. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್ ಎಸ್.ಐ.ಆರ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಎಲ್ಲ ಸಂಘಟನೆಗಳ ಮತ್ತು ವಿವಿಧ ಜಾತ್ಯತೀತ ಪಕ್ಷಗಳ ಮುಖಂಡರು ಮುಲಾಜಿಲ್ಲದೆ ಹೋರಾಟ ಮುಂದುವರಿಸಬೇಕು. ಯಾವ ಬೆಲೆ ತೆತ್ತಾದರೂ ಸರಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಪುಟ್ಟನಂಜಯ್ಯ, ಪಿಯುಸಿಎಲ್ ಜಿಲ್ಲಾಧ್ಯಕ್ಷ ಪುಣಜನೂರುದೊರೆಸ್ವಾಮಿ, ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಂಘಸೇನಾ, ಪುನರ್ಚಿತ್ ಸಂಸ್ಥೆಯ ವೀರಭದ್ರನಾಯಕ, ಬಂಗಾರಸ್ವಾಮಿ, ಅಬ್ರಹಾಂ.ಡಿ.ಸಿಲ್ವಾ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ, ಪದಾಧಿಕಾರಿಗಳಾದ ಸಿ.ಕೆ.ನಯಾಜ್ ಉಲ್ಲಾ, ಸಿ.ಎಸ್.ಸಯ್ಯದ್ ಆರಿಫ್, ಅಬುಸಲಾಂ ಇತರರು ಭಾಗವಹಿಸಿದ್ದರು.