ಅಣು ವಿದ್ಯುತ್ ಸ್ಥಾವರಕ್ಕಾಗಿ ಗಂಗಾವತಿ ಸುತ್ತ ಜಾಗ ಹುಡುಕಾಟ

KannadaprabhaNewsNetwork |  
Published : Dec 20, 2024, 12:47 AM IST
19ಕೆಪಿಎಲ್21 ನಗರದ ಬಸವೇಶ್ವರ ವೃತ್ತದಲ್ಲಿ ಕ್ರಿಸ ಮಸ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಗೆ ಗವಿ ಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿ ಶುಭ ಹಾರೈಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಾಗಲೇ ಗುರುತಿಸಿದ ಜಾಗಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬೇರೆಡೆ ಜಾಗದ ಹುಡುಕಾಟ ಶುರುವಾಗಿದೆ.

ಕೊಪ್ಪಳದ ಅರಸಿನಕೇರಿ ಬಳಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬೇರೆಡೆ ಜಾಗಕ್ಕಾಗಿ ಪರಿಶೀಲನೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳಜಿಲ್ಲೆಯಲ್ಲಿಯೇ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಾಗಲೇ ಗುರುತಿಸಿದ ಜಾಗಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಬೇರೆಡೆ ಜಾಗದ ಹುಡುಕಾಟ ಶುರುವಾಗಿದೆ.

ಜಿಲ್ಲಾಧಿಕಾರಿ ನಲಿನ್ ಅತುಲ್ ಅವರ ಮೌಖಿಕ ಸೂಚನೆಯ ಮೇರೆ ಗಂಗಾವತಿ ತಾಲೂಕಿನ ವಿವಿಧೆಡೆ ಹಾಗೂ ಕಾರಟಗಿ ತಾಲೂಕಿನ ಹಲವೆಡೆ ಜಾಗ ಪರಿಶೀಲನೆ ಕಾರ್ಯ ನಡೆದಿದೆ.ಗಂಗಾವತಿ ತಾಲೂಕಿನ ವೆಂಕಟಗಿರಿ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಅರಣ್ಯ ಪ್ರದೇಶ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿರುವ ಜಾಗ ಸೂಕ್ತವಾಗಬಹುದೇ ಎಂದು ಪರಿಶೀಲನೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗಂಗಾವತಿ ತಹಸೀಲ್ದಾರ ಯು. ನಾಗರಾಜ ಕಂದಾಯ ನಿರೀಕ್ಷಕರಿಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಈಗ ಪರಿಶೀಲನೆ ಮಾಡಲಾಗುತ್ತಿದೆ.ಕೇವಲ ಗಂಗಾವತಿ ತಾಲೂಕು ಅಷ್ಟೇ ಅಲ್ಲ, ಕಾರಟಗಿ, ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿಯೂ ಅಣು ವಿದ್ಯುತ್‌ ಸ್ಥಾವರ ಸ್ಥಾಪನೆಗಾಗಿ ಜಾಗ ಹುಡುಕಾಟ ನಡೆದಿದೆ ಎನ್ನುವುದು ಗೊತ್ತಾಗಿದೆ.

ತೀವ್ರ ವಿರೋಧ:ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಕೇಂದ್ರ ಸರ್ಕಾರವೇ ಗುರುತಿಸಿದ್ದ ಜಾಗದ ಕುರಿತು ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಜಿಲ್ಲಾಡಳಿತ ಈಗ ಪರ್ಯಾಯ ಜಾಗ ಹುಡುಕಾಟ ಮಾಡುತ್ತಿದೆ. ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಸುಮಾರು 1200 ಎಕರೆ ಜಾಗ ಬೇಕಾಗಿರುವುದರಿಂದ ಮತ್ತು ಅದು ಬಹುತೇಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ಅಡಿಯಲ್ಲಿ ಸರ್ಕಾರಿ ಒಡೆತನದಲ್ಲಿಯೇ ಅಧಿಕವಾಗಿರುವ ಕಡೆಯೇ ಹುಡುಕಾಟ ನಡೆಸಲಾಗುತ್ತಿದೆ. ಅಲ್ಪಸ್ವಲ್ಪ ಜಾಗ ಅಗತ್ಯಬಿದ್ದರೆ ಭೂಸ್ವಾಧೀನದ ಮೂಲಕ ಖರೀದಿಸಬಹುದಾಗಿದೆ. ಆದರೆ, 1200 ಎಕರೆಯನ್ನು ಖಾಸಗಿಯಾಗಿಯೇ ಗುರುತಿಸಿ, ಖರೀದಿಸುವುದಕ್ಕೆ ಹಿಂದೇಟು ಹಾಕಲಾಗುತ್ತಿದ್ದು, ಸರ್ಕಾರಿ ಭೂಮಿಯನ್ನೇ ಪ್ರಮುಖವಾಗಿಟ್ಟುಕೊಂಡು ಹುಡುಕಾಟ ನಡೆಸಲಾಗಿದೆ.

ಜಿಲ್ಲೆಯಲ್ಲಿ ಹಲವಾರು ಕಡೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ ಹತ್ತಾರು ಸಾವಿರ ಎಕರೆ ಪ್ರದೇಶ ಇದೆ. ಅದರಂತೆ ಗಂಗಾವತಿ ತಾಲೂಕಿನ ವೆಂಕಟಗಿರಿ, ಬಸಾಪಟ್ಟಣ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶ ಅರಣ್ಯ ಇಲಾಖೆಯಡಿಯಲ್ಲಿ ಹಾಗೂ ಕಂದಾಯ ಇಲಾಖೆಯ ಅಡಿಯಲ್ಲಿ ಸಾಕಷ್ಟು ಭೂಮಿ ಇರುವುದರಿಂದ ಅದನ್ನು ಸಹ ಪರಿಶೀಲನೆ ಮಾಡಲಾಗುತ್ತಿದೆ ಎನ್ನುವುದು ಗಮನಾರ್ಹ.ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ಸುಮಾರು 1200 ಎಕರೆ ಭೂಮಿಯನ್ನು ವೆಂಕಟಗಿರಿ ಸುತ್ತಮುತ್ತ ಪರಿಶೀಲಿಸುವಂತೆ ಕಂದಾಯ ನಿರೀಕ್ಷಕರಿಗೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ ಯು. ನಾಗರಾಜ ತಿಳಿಸಿದ್ದಾರೆ.ಕ್ರಿಸ್‌ಮಸ್‌ ಸೌಹಾರ್ದ ಯಾತ್ರೆಗೆ ಗವಿಶ್ರೀ ಚಾಲನೆ:

ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಕ್ರಿಸ್‌ಮಸ್‌ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಗೆ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಿದರು.

ಸೌಹಾರ್ದ ಯಾತ್ರೆ ಪ್ರಾರಂಭದ ಪೂರ್ವದಲ್ಲಿ ಮೌಲಾನಾ ಅಬುಲ್ ಹಸನ್ ಖಾಝಿ ಮಾತನಾಡಿ, ಯಾವುದೇ ಧರ್ಮವನ್ನು ಸ್ವೀಕರಿಸುವುದು ಅವರವರ ಇಚ್ಛೆ, ಯಾರಿಂದ ಯಾರಿಗೂ ಒತ್ತಾಯ ಇರುವುದಿಲ್ಲ, ಸ್ವ ಇಚ್ಛೆಯಿಂದ ಯಾವುದೇ ಧರ್ಮ ಸ್ವೀಕರಿಸಬಹುದು, ಮಾನವ ಮಣ್ಣಿನಿಂದ ಹುಟ್ಟಿದ್ದಾನೆ, ನಾವು ಮನುಷ್ಯರಾಗಿದ್ದೇವೆ, ಮಾನವೀಯತೆ ಬರಲು ತಮ್ಮ ತಮ್ಮ ಧರ್ಮವನ್ನು ಅರಿತು ಪಾಲನೆ ಮಾಡಬೇಕು ಎಂದರು.

ಪ್ರಕ್ರಿಯೆ ಸಂಸ್ಥೆಯ ಮುಖ್ಯಸ್ಥ, ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ, ನಮ್ಮ ರಾಜ್ಯ ಶರಣರ, ಸೂಫಿ, ಸಂತರ ನಾಡಾಗಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಈ ಶರಣರ ವಚನಗಳನ್ನು ಸ್ಮರಿಸಬೇಕಿದೆ. ಈ ಕೆಲವು ಹಿತಾಸಕ್ತಿಗಳು ಬಹುಜನರ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿವೆ ಎಂದರು.

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತಾಡಿದರು. ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ. ಬೆಣಕಲ್ಲ, ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಫಾದರ್ ತಿಪ್ಪೇಶ್ ನಾಯಕ್ ಮೊದಲಾದವರು ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ