ನಕಲಿ ಸುಪ್ರೀಂ ಆದೇಶ ನೀಡಿ ರಿಲೀಸ್‌ ಆಗಿದ್ದವಗೆ ಶೋಧ!

KannadaprabhaNewsNetwork |  
Published : May 25, 2026, 02:00 AM ISTUpdated : May 25, 2026, 11:21 AM IST
FIR

ಸಾರಾಂಶ

ಸಜಾ ಬಂಧಿಯಾಗಿದ್ದ ಕೈದಿಯೊಬ್ಬ ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿಯನ್ನು ವಕೀಲರ ಮೂಲಕ ಜೈಲಿಗೆ ಸಲ್ಲಿಸಿ ಬಿಡುಗಡೆ ಆಗಿರುವ ವಿಚಾರ 8 ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

 ಬೆಂಗಳೂರು :  ಸಜಾ ಬಂಧಿಯಾಗಿದ್ದ ಕೈದಿಯೊಬ್ಬ ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಪ್ರತಿಯನ್ನು ವಕೀಲರ ಮೂಲಕ ಜೈಲಿಗೆ ಸಲ್ಲಿಸಿ ಬಿಡುಗಡೆ ಆಗಿರುವ ವಿಚಾರ 8 ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಜೈಲಿನ ಪ್ರಭಾರ ಅಧೀಕ್ಷಕ ಕರ್ಣ ಬಿ.ಕ್ಷತ್ರಿ ನೀಡಿದ ದೂರಿನನ್ವಯ ತಮಿಳುನಾಡು ಮೂಲದ ಶಂಕರ್‌ ಅರ್ಮಗಂ ಹಾಗೂ ಇತರರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ?:

ತಮಿಳುನಾಡು ಮೂಲದ ಶಂಕರ್‌ ಆರ್ಮುಗಂ ವಿರುದ್ಧ 2001ರಲ್ಲಿ ಅಪಹರಣ ಮತ್ತು ಹಲ್ಲೆ ಪ್ರಕರಣ ಸಂಬಂಧ ನಗರದ ಠಾಣೆಯೊಂದರಲ್ಲಿ ಕೇಸ್‌ ದಾಖಲಾಗಿತ್ತು. ಈ ಸಂಬಂಧ ತ್ವರಿತ ವಿಲೇವಾರಿ ನ್ಯಾಯಾಲಯದ ಶಂಕರ್‌ನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಹಾಗೂ 10,000 ರು. ದಂಡ ವಿಧಿಸಿತ್ತು. ಈ ಮಧ್ಯೆ ಅಪರಾಧಿ ಶಂಕರ್‌, ಸುಪ್ರೀಂ ಕೋರ್ಟ್‌ ತನ್ನ ಬಿಡುಗಡೆಗೆ ಆದೇಶ ನೀಡಿದೆ ಎಂದು ಹೇಳಿ ಆದೇಶದ ಪ್ರತಿಯನ್ನು ತನ್ನ ವಕೀಲರ ಮೂಲಕ 2018ರ ನ.13ರಂದು ಜೈಲಿನ ಅಧಿಕಾರಿಗಳಿಗೆ ಸಲ್ಲಿಸಿದ್ದ. ಅದರಂತೆ ಜೈಲಿನ ಅಧಿಕಾರಿಗಳು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, 10,000 ರು. ದಂಡ ಕಟ್ಟಿಸಿಕೊಂಡು ಶಂಕರ್‌ನನ್ನು ಬಿಡುಗಡೆ ಮಾಡಿದ್ದರು.

ಡಿಜಿಪಿಗೆ ಬರೆದ ಅನಾಮಧೇಯ ಪತ್ರದಿಂದ ಪ್ರಕರಣ ಬೆಳಕಿಗೆ:

ಕೆಲ ದಿನಗಳ ಹಿಂದೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಪತ್ರ ಬರೆದು, 2018ರಲ್ಲಿ ಶಂಕರ್‌ ಅರ್ಮುಗಂ ಎಂಬಾತ ಸುಪ್ರೀಂ ಕೋರ್ಟ್‌ ನಕಲಿ ಆದೇಶ ಸಲ್ಲಿಸಿ ಬಿಡುಗಡೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ದೂರಿನೊಂದಿಗೆ ಸಲ್ಲಿಸಿದ್ದರು. ಈ ದೂರು ಆಧರಿಸಿ ಅಲೋಕ್‌ ಕುಮಾರ್‌ ಅವರು ಕಾರಾಗೃಹ ಇಲಾಖೆ ಐಜಿಪಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಬಳಿಕ ತನಿಖೆ ನಡೆಸಿ, ಅಪರಾಧಿ ಸಲ್ಲಿಸಿದ್ದ ಆದೇಶದ ಪ್ರತಿಯನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸಿ ಸತ್ಯಾಸತ್ಯತೆ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿತ್ತು.

ಆದೇಶ ನೀಡಿಲ್ಲ ಎಂದು ಸುಪ್ರೀಂ ಸ್ಪಷ್ಟನೆ

ಸುಪ್ರೀಂ ಕೋರ್ಟ್‌ನಿಂದ ಇದೀಗ ಪ್ರತಿಕ್ರಿಯೆ ಬಂದಿದ್ದು, 2018ರ ನ.13ರಂದು ಅಪರಾಧಿ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್‌ನಿಂದ ಯಾವುದೇ ಆದೇಶ ಕಳುಹಿಸಿಲ್ಲ. ಇದು ನಕಲಿ ಎಂದು ಪ್ರಮಾಣೀಕರಿಸಿತ್ತು. ಈ ಸಂಬಂಧ ಅಪರಾಧಿ ಶಂಕರ್‌ ವಿರುದ್ಧ ನಕಲು ಮತ್ತು ವಂಚನೆ ಹಾಗೂ ಇತರೆ ಆರೋಪಗಳ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೈಲು ಅಧಿಕಾರಿಗಳು ಶಾಮೀಲು?

ವಿಷಯ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಶಂಕರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನ ಆದೇಶವನ್ನು ಜೈಲಾಧಿಕಾರಿಗಳು ಮರು ಪರಿಶೀಲನೆ ಮಾಡದೆ ಬಿಡುಗಡೆ ಮಾಡಿದ್ದಾದರೂ ಹೇಗೆ? ಇದರಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಅವರು ಶಾಮೀಲಾಗಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.

ಅಧಿಕಾರಿಗಳಿಗೆ ಇಲಾಖಾ ವಿಚಾರಣೆ ಬಿಸಿ:

ಮತ್ತೊಂದೆಡೆ ಡಿಜಿಪಿ ಅಲೋಕ್‌ ಕುಮಾರ್‌, ಕೈದಿ ಬಿಡುಗಡೆ ವೇಳೆ ಜೈಲಿನ ಮುಖ್ಯ ಅಧೀಕ್ಷಕರು ಯಾರು? ಸುಪ್ರೀಂ ಕೋರ್ಟ್ ಆದೇಶ ಪ್ರತಿ ಪರಿಶೀಲಿಸಿದ ಅಧಿಕಾರಿ, ಸಿಬ್ಬಂದಿ ಯಾರು? ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಇ20 ಪೆಟ್ರೋಲ್‌ನಿಂದ ಮೈಲೇಜ್‌ ತಗ್ಗಿದ ದೂರು ಬಂದಿಲ್ಲ
ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ವರದಿ