ಕನ್ನಡಪ್ರಭ ವಾರ್ತೆ ಕಲಬುರಗಿ
ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯದಿಂದ ಜು.7ರಂದು ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕಲಬುರಗಿ ವಿಭಾಗ ಮಟ್ಟದ ಎರಡನೇಯ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ತಿಳಿಸಿದರು.ಸಮ್ಮೇಳನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅರ್ಥಪೂರ್ಣ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿನ ದಾಸ ಸಾಹಿತ್ಯ ಸಾಧಕರಿಗೆ ಹರಿದಾಸ ರತ್ನ ಪ್ರಶಸ್ತಿ ನೀಡಲಾಗುವುದು. ಅಲ್ಲದೆ ದಾಸ ಸಾಹಿತ್ಯ ಕುರಿತು ಪಿಎಚ್‌ಡಿ ಮಾಡಿದವರಿಗೆ ಮತ್ತು ಇತರ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಪೂಜ್ಯ ಲಿಂಗರಾಜಪ್ಪ ಅಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಉದ್ಯಮಿ ಸಂಜೀವ ಗುಪ್ತಾ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಆನಂದ ದಂಡೋತಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಕುಮಾರ ಪಾಟೀಲ್ ತೇಗಲತಿಪ್ಪಿ, ನೂತನ ವಿದ್ಯಾಲಯಸಂಸ್ಥೆ ಅಧ್ಯಕ್ಷ ಡಾ.ಗೌತಮ ಜಾಗಿರದಾರ ಉಪಸ್ಥಿತರಿರುವರು.ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಡಾ. ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆ ವಹಿಸುವರು. ಖ್ಯಾತ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಹರಿದಾಸರತ್ನ ಪ್ರಶಸ್ತಿ ಪ್ರದಾನ ಮಾಡುವರು. ಆಕಾಶವಾಣಿ ನಿವೃತ್ತ ಅಧಿಕಾರಿ ಡಾ.ಸದಾನಂದ ಪೆರ್ಲ ಸಮ್ಮೇಳನಾಧ್ಯಕ್ಷರ ಕನ್ನಡದ ಕೃಷ್ಣ ಪುಸ್ತಕ ಬಿಡುಗಡೆ ಮಾಡುವರು ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 12.15ಕ್ಕೆ ಅಮೃತ ಸಿಂಚನ ಗೋಷ್ಠಿಯಲ್ಲಿ ದಾಸಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕುರಿತು ಚಿಂತನ ಮಂಥನ ನಡೆಯಲಿದೆ. ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆ ವಹಿಸುವರು. ಡಾ.ಶೈಲಜಾ ಕೊಪ್ಪರ ಹಾಗೂ ರೂಪಾ ಕುಲಕರ್ಣಿ ಉಪನ್ಯಾಸ ನೀಡುವರು. ಜಿಲ್ಲಾಕಸಾಪ ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀಲ್ ಜಾವಳಿ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ ಹಾಗೂ ಕಸಾಪ ದಕ್ಷಿಣ ವಲಯದ ಮಾಜಿ ಅಧ್ಯಕ್ಷೆ ಜ್ಯೋತಿ ಲಾತೂರಕರ, ಕಸಾಪದಕ್ಷಿಣ ವಲಯದ ಮಹಿಳಾ ಪ್ರತಿನಿಧಿ ವೆಂಕುಬಾಯಿ ರಜಪೂತ ಉಪಸ್ಥಿತರಿರುವರು.ಮಧ್ಯಾಹ್ನ 2ಕ್ಕೆ ಅನಂತ ಚಿಂಚನಸೂರ ತಂಡದಿಂದ ನೃತ್ಯ ರೂಪಕ ನಂತರ ಅನಂತ ಮಿಸ್ತಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರಿಂದ ದಾಸರ ಹಾಡಿನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ 16 ಮಹಿಳಾ ಭಜನಾ ಮಂಡಳಿಗಳು ಭಾಗವಹಿಸಲಿವೆ. ವ್ಯಾಸರಾಜ ಸಂತೆಕೆಲ್ಲೂರ ಹಾಗೂ ಸುನಂದಾ ಸಾಲವಾಡಗಿ ತೀರ್ಪು ಗಾರರಾಗಿದ್ದಾರೆ ಎಂದರು.
ಸಂಜೆ 4.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶರಣಬಸವ ವಿಶ್ವ ವಿದ್ಯಾಲಯದ ಕುಲಪತಿ ಡಾ.ಅನೀಲಕುಮಾರ ಬಿಡವೆ ಸಮಾರೋಪ ಭಾಷಣ ಮಾಡುವರು. ಸಮ್ಮೇಳನಾಧ್ಯಕ್ಷ ಡಾ. ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆ ವಹಿಸುವರು.ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಪತ್ರಕರ್ತರಾದ ಬಾಬುರಾವ ಯಡ್ರಾಮಿ, ಎಸ್.ಬಿ.ಜೋಶಿ, ಡಿ.ಶಿವಲಿಂಗಪ್ಪ, ಹೋಮಿಯೋಪಥಿ ವೈದ್ಯ ಡಾ. ಎಸ್.ಎಸ್.ಸಿದ್ಧಾಪುರಕರ, ಕಸಾಪ ಗೌರವ ಕೋಶಾಧ್ಯಕ್ಷ ಪ್ರಹ್ಲಾದ ಪೂಜಾರಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಸಾಧಕರನ್ನು ಸನಾನಿಸಲಾಗುವುದು. ಕಸಾಪ ಗೌರವ ಕಾರ್ಯದರ್ಶಿ ಧನೇಶ ಮಾಲಗತ್ತಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಂಬಳಿಮಠ, ಸಹ ಕಾರ್ಯದರ್ಶಿಗಳಾದ ಶಿವಕುಮಾರ ಸಂಘ ಸಂಸ್ಥೆ ಪ್ರತಿನಿಧಿ ಸಂಗಣ್ಣ ಚೋರಗಸ್ತಿ, ಮಹಿಳಾ ಪ್ರತಿನಿಧಿ ವೆಂಕುಬಾಯಿ ರಜಪೂತ ಸುದ್ದಿಗೋಷ್ಠಿಯಲ್ಲಿದ್ದರು.ಕಲಬುರಗಿ ವಿಭಾಗ ಮಟ್ಟದ ಎರಡನೇಯ ದಾಸ ಸಾಹಿತ್ಯ ಸಮ್ಮೇಳನ ಆಯೋಜನೆ ಕುರಿತು ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಮಾತನಾಡಿದರು.