ರಾಮನಗರ: ನಗರಸಭೆ ಹಮ್ಮಿಕೊಂಡಿರುವ ನಿಮ್ಮ ಆಸ್ತಿ-ನಿಮ್ಮ ಹಕ್ಕು ಮನೆ ಮನೆಗೆ ಇ-ಖಾತೆ ಅಭಿಯಾನವು ನಾಗರೀಕರಲ್ಲಿ ತಮ್ಮ ಆಸ್ತಿಪಾಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುತ್ತಿದೆ.
ಮೊದಲ ಕಾರ್ಯಕ್ರಮದಲ್ಲಿ ಒಂದೇ ದಿನದಲ್ಲಿ 43 ಖಾತೆಗಳನ್ನು ವಿತರಿಸಿ ಹೊಸ ದಾಖಲೆ ಬರೆಯಲಾಗಿತ್ತು. ಆದರೆ, ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸರ್ವರ್ ಸಮಸ್ಯೆಯ ಕಾರಣ 25 ಇ-ಖಾತೆಗಳನ್ನು ವಿತರಿಸಲು ಮಾತ್ರ ಸಾಧ್ಯವಾಯಿತು. ಅರ್ಜಿದಾರರಿಗೆ ಒಂದೆರಡು ದಿನದಲ್ಲಿ ಇ-ಆಸ್ತಿ ದಾಖಲೆ ಸಿಗುವ ಖಾತರಿ ಅಧಿಕಾರಿಗಳಿಂದ ದೊರೆತಿದೆ.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಎರಡನೇ ದಿನದ ಮನೆಮನೆಗೆ ಖಾತಾ ಅಭಿಯಾನಕ್ಕೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಅಭಿಯಾನ ಸಾರ್ವಜನಿಕರಲ್ಲಿ ತಮ್ಮ ಆಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಿದೆ ಎಂದು ಹೇಳಿದರು.ಹಲವು ವರ್ಷಗಳಿಂದ ಕಂದಾಯ ಪಾವತಿ ಮಾಡದೆ, ಖಾತೆ ಮಾಡಿಕೊಳ್ಳದೆ ಉದಾಸೀನ ತೋರಿದ್ದರು. ಮನೆ ಕಟ್ಟುವ ವೇಳೆ, ಆಸ್ತಿ ಮಾರಾಟ, ವಿಭಾಗ, ಪೌತಿ ಖಾತೆ, ಲೋನ್ ಪಡೆಯುವ ಸಂದರ್ಭದಲ್ಲಿ ಮಾತ್ರ ಇ-ಖಾತೆ ಮಾಡಿಸಿಕೊಳ್ಳಲು ಬರುತ್ತಿದ್ದರು. ಇದೀಗ ಆಸ್ತಿ ಮಾಲೀಕರಿಗೆ ಖಾತಾ ದಾಖಲೆಗಳ ಕುರಿತು ಜಾಗೃತಿ ಮೂಡುತ್ತಿದ್ದು, ಕಂದಾಯ ಪಾವತಿ ಮಾಡಿ ಇ-ಆಸ್ತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದರು.
ನಗರಸಭೆ ಆಯುಕ್ತ ಡಾ. ಜಯಣ್ಣ, ಸದಸ್ಯರಾದಿ ಪಾರ್ವತಮ್ಮ, ಸೋಮಶೇಖರ್ (ಮಣಿ), ಗಿರಿಜಮ್ಮ ಗುರುವೇಗೌಡ, ಪದ್ಮ ಜಯರಾಂ, ಗೋವಿಂದರಾಜು, ಮುಖಂಡರಾದ ಶಿವಕುಮಾರಸ್ವಾಮಿ ಚಂದ್ರು, ಗೂಳಿಕುಮಾರ್, ನಗರಸಭೆ ಅಧಿಕಾರಿಗಳಾದ ಕಿರಣ್, ನಾಗರಾಜು, ಪ್ರಸನ್ನ, ರೇಖಾ, ವೇದ, ಆನಂದ್ ಹಾಜರಿದ್ದರು.
ಇಂದು ಕನ್ನಿಕಾ ಮಹಲ್‌ನಲ್ಲಿ ಅಭಿಯಾನ
ಇ-ಆಸ್ತಿ ಸೃಜಿಸಲು ಆಸ್ತಿ ಮಾಲೀಕರು ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಪಡಿತರ ಚೀಟಿ ಇತ್ಯಾದಿ ಮಾಲೀಕರ ಗುರುತನ್ನು ದೃಢೀಕರಿಸುವ ದಾಖಲೆ, ಪೌತಿ ಖಾತೆ ಆದಲ್ಲಿ ಮರಣ ಹೊಂದಿದ ಆಸ್ತಿ ಮಾಲೀಕರ ಮರಣ ಪ್ರಮಾಣ ಪತ್ರ ಮತ್ತು ವಂಶವೃP ಪ್ರಮಾಣ ಪತ್ರ, ನೀರಿನ ತೆರಿಗೆ ರಶೀದಿ ಪ್ರತಿ, ಆರ್.ಆರ್.ಸಂಖ್ಯೆ ದಾಖಲೆ, 1.4.2004 ರ ನಂತರ ಆಸ್ತಿ ನೋಂದಣಿಯಾಗಿದ್ದರೆ ಆ ದಿನಾಂಕದಿಂದ ಪಸಕ್ತ ಸಾಲಿನವರೆಗೆ ನೂಮೂನೆ 15ರ ಇ.ಸಿ., ಆಸ್ತಿಯ ಭಾವಚಿತ್ರ, ನೋಂದಾಯಿತ ಕ್ರಮ/ದಾನ/ವಿಭಾಗ/ವಿಲ್/ಆಸ್ತಿ ವಿಭಜನೆ/ಹಕ್ಕು ನಿವೃತ್ತಿ ಮುಂತಾದ ದಾಖಲೆಗಳು, ಪ್ರಸಕ್ತ ಸಾಲಿನವರೆಗೆ ಕಂದಾಯ ಪಾವತಿಸಿರುವ ರಶೀದಿ (ನಮೂನೆ 2 ಮತ್ತು ಚಲನ್), ವಿದ್ಯುತ್ ನಿರಪೇಕ್ಷಣ ಪತ್ರ, ಕಟ್ಟಡ ಪರವಾನಿಗೆ ನಕ್ಷೆ ಪ್ರತಿ, ವಿಭಜಿತ ಸ್ವತ್ತಿನ ನಕ್ಷೆ (ಆಸ್ತಿಗಳು ವಿಭಜನೆಗೊಂಡಿದ್ದಲ್ಲಿ). ಈ ದಾಖಲೆಗಳನ್ನು ಆಸ್ತಿ ಮಾಲೀಕರು ನೀಡಿದಲ್ಲಿ ಸ್ಥಳದಲ್ಲಿಯೇ ಇ-ಆಸ್ತಿ ಸೃಜಿಸಿ ಕೊಡುವುದಾಗಿ ನಗರಸಭೆ ಆಯುಕ್ತರಾದ ಜಯಣ್ಣ ತಿಳಿಸಿದ್ದಾರೆ.
1.ರಾಮನಗರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಸಮುದಾಯದ ಭವನದಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ - ಖಾತೆ ವಿತರಿಸಿದರು.