ಚಹಾಗೆ ರಫ್ತಿನಲ್ಲಿ ಭಾರತಕ್ಕೆ ಎರಡನೇ ಸ್ಥಾನ: ಕೆ.ಟಿ.ಹನುಮಂತು

KannadaprabhaNewsNetwork |  
Published : Jun 03, 2024, 12:30 AM IST
2ಕೆಎಂಎನ್‌ಡಿ-2ಮಂಡ್ಯದ ಟೀ-ಬೆಂಚ್‌ ಅಂಗಡಿಯಲ್ಲಿ ವಿಶ್ವ ಚಹಾ ದಿನಾಚರಣೆ ಅಂಗವಾಗಿ ಟೀ ಕಾರ್ಮಿಕರಾದ ಸಂಜಯ್ ಮತ್ತು ಕಿರಣ್ ಅವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ನೀರಿನ ನಂತರ ವಿಶ್ವದಲ್ಲಿ ಅತೀ ಹೆಚ್ಚು ಸೇವಿಸುವ ಪಾನೀಯ ಚಹಾ. ಇದು ಸುದೀರ್ಘ ಮತ್ತು ಶ್ರೀಮಂತ ಇತಿಹಾಸ ಹೊಂದಿದೆ, ೫ ಸಾವಿರ ವರ್ಷಗಳ ಹಿಂದೆ ಚಹಾ ಸೇವಿಸುತ್ತಿದ್ದುದಕ್ಕೆ ದಾಖಲೆಗಳಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ನೇಹ ಬಳಗ ವೃದ್ಧಿಸುವ ಟೀ ಪಾನೀಯ ದಣಿದ ಮನಸ್ಸಿಗೆ ಉಲ್ಲಾಸ-ಚೇತೋಹಾರಿಕೆ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು.

ನಗರದ ಸುಭಾಷ್‌ನಗರದಲ್ಲಿರುವ ಟೀ ಬೆಂಚ್ ಅಂಗಡಿಯ ಆವರಣದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ, ಮತ್ತು ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಟೀ ದಿನಾಚರಣೆ ಅಂಗವಾಗಿ ಉಚಿತ ಟೀ ವಿತರಣೆ-ಟೀ ಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೀರಿನ ನಂತರ ವಿಶ್ವದಲ್ಲಿ ಅತೀ ಹೆಚ್ಚು ಸೇವಿಸುವ ಪಾನೀಯ ಚಹಾ. ಇದು ಸುದೀರ್ಘ ಮತ್ತು ಶ್ರೀಮಂತ ಇತಿಹಾಸ ಹೊಂದಿದೆ, ೫ ಸಾವಿರ ವರ್ಷಗಳ ಹಿಂದೆ ಚಹಾ ಸೇವಿಸುತ್ತಿದ್ದುದಕ್ಕೆ ದಾಖಲೆಗಳಿವೆ. ಅತೀ ಹೆಚ್ಚು ಟೀ ಬೆಳೆಯುವ ಮತ್ತು ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ ೨ನೇ ಸ್ಥಾನವಿದೆ, ಮೊದಲ ಸ್ಥಾನ ಚೀನಾ ಪಡೆದುಕೊಂಡಿದೆ ಎಂದು ನುಡಿದರು.

ಮಿತವಾಗಿ ಟೀ ಸೇವನೆ ಮಾಡುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು, ಆಯಾಸ ನೀಗಿಸಿಕೊಂಡು ಚೇತೋಹಾರಿಕೆ ಪಡೆಯಬಹುದು, ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದು ಎಂದು ಮಾಹಿತಿ ನೀಡಿದರು.

ಚಹಾವು ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಚಹಾ ಉದ್ಯಮವು ಆದಾಯ ಮತ್ತು ಉದ್ಯೋಗಗಳ ಪ್ರಮುಖ ಮೂಲವಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಲಕ್ಷಾಂತರ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಚಹಾ ಉತ್ಪಾದನೆಯನ್ನು ಅವಲಂಬಿಸಿವೆ. ಈ ವರ್ಷದ ಅಂತಾರಾಷ್ಟ್ರೀಯ ಚಹಾ ದಿನವು ‘ಬೆಳೆಯಿಂದ ಕಪ್‌ವರೆಗೆ’ ಚಹಾ ಉತ್ಪಾದನಾ ಸರಪಳಿಯ ಉದ್ದಕ್ಕೂ ಮಹಿಳೆಯರು ವಹಿಸುವ ಪಾತ್ರವನ್ನು ನಿರ್ದಿಷ್ಟವಾಗಿ ಗೌರವಿಸುತ್ತದೆ ಎಂದು ಹೇಳಿದರು.

ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಚಹಾ ಉದ್ಯಮ ನಿರುದ್ಯೋಗ ಸಮಸ್ಯೆಯನ್ನು ನೀಗಿಸುತ್ತಿದೆ, ಗ್ರಾಮೀಣರಲ್ಲಿ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಚಹಾ ಉತ್ಪಾದಿಸುವ ದೇಶಗಳಲ್ಲಿ ಆಹಾರ ಭದ್ರತೆ ಸುಧಾರಿಸುತ್ತಿದೆ ಎಂದರು.

ಟೀ ಸೇವಿಸುವ ಪಾನೀಯ ಪ್ರಿಯರಿಗೆ ಸುಮಾರು ೧೫೦ಕ್ಕೂ ಹೆಚ್ಚು ಟೀ ಪಾನೀಯಗಳು ಲಭ್ಯವಿವೆ, ಈಗಾಲೇ ಸಾಧಾರಣ ಟೀಯೋಂದಿಗೆ ಶುಂಠಿ ಟೀ, ಪುದೀನಾ ಟೀ, ಮಸಾಲೆ ಟೀ, ನಿಂಬೆ ಟೀ, ಕಪ್ಪು ಟೀ, ಕೋಡ್ಲ್ ಟೀ, ಒಣಹಣ್ಣುಗಳ ಟೀ ಹೀಗೆ ಹೆಸರಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟೀ ಕಾರ್ಮಿಕರಾದ ಸಂಜಯ್ ಮತ್ತು ಕಿರಣ್ ಅವರನ್ನು ಅಭಿನಂದಿಸಲಾಯಿತು. ನಂತರ ಟೀ ಪ್ರಿಯರಿಗೆ ಉಚಿತವಾಗಿ ವಿವಿಧ ಬಗೆಯ ಟೀ ಪಾನಿಯವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಜಿಲ್ಲಾಧ್ಯಕ್ಷ ರಮೇಶ್, ಸಕ್ಕರೆನಾಡು ಅಲಯನ್ಸ್ ಸಂಸ್ಥೆ ಅಧ್ಯಕ್ಷ ಸೋಮಶೇಖರ್,ಪ್ರಾಧ್ಯಪಕ ಲಿಂಗರಾಜು, ಎಸ್.ಎಂ.ಲೋಕೇಶ್, ಮರಿಗೌಡ ಜಿ.ಬಿ.ಕುಮಾರ್ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ