ದ್ವಿತೀಯ ಪಿಯು ಫಲಿತಾಂಶ; ಕುಸಿತ ಕಂಡ ಅಖಂಡ ಬಳ್ಳಾರಿ ಜಿಲ್ಲೆ

KannadaprabhaNewsNetwork | Published : Apr 9, 2025 12:34 AM

ಸಾರಾಂಶ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ಸುಧಾರಣೆ ಕಂಡಿದ್ದರೂ ಫಲಿತಾಂಶವಾರು ಕುಸಿತ ಕಂಡಿದೆ. ಕಳೆದ ಬಾರಿ ರಾಜ್ಯದಲ್ಲಿ 29ನೇ ಸ್ಥಾನದಲ್ಲಿದ್ದ ಅಖಂಡ ಜಿಲ್ಲೆ ಈ ಬಾರಿ 27ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಶೇ.74.70ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ 64.41ರಷ್ಟು ಫಲಿತಾಂಶ ಬಂದಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ಸುಧಾರಣೆ ಕಂಡಿದ್ದರೂ ಫಲಿತಾಂಶವಾರು ಕುಸಿತ ಕಂಡಿದೆ. ಕಳೆದ ಬಾರಿ ರಾಜ್ಯದಲ್ಲಿ 29ನೇ ಸ್ಥಾನದಲ್ಲಿದ್ದ ಅಖಂಡ ಜಿಲ್ಲೆ ಈ ಬಾರಿ 27ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಶೇ.74.70ರಷ್ಟು ಫಲಿತಾಂಶ ಪಡೆದಿತ್ತು. ಈ ಬಾರಿ 64.41ರಷ್ಟು ಫಲಿತಾಂಶ ಬಂದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿನ ಸಂಜನಾಬಾಯಿ ಎಲ್.ಆರ್. ಕಲಾ ವಿಭಾಗದಲ್ಲಿ (597 ಅಂಕ) ರಾಜ್ಯಕ್ಕೆ ಹಾಗೂ ಅಖಂಡ ಜಿಲ್ಲೆಗೆ ಮೊದಲ ಸ್ಥಾನ, ಹಡಗಲಿ ತಾಲೂಕಿನ ಇಟಗಿಯ ಪಂಚಮಸಾಲಿ ಪದವಿಪೂರ್ವ ಕಾಲೇಜಿನ ಕೆ. ನಿರ್ಮಲ (596 ಅಂಕ) ಎರಡನೇ ಸ್ಥಾನ ಪಡೆದಿದ್ದಾರೆ. ಕೊಟ್ಟೂರು ತಾಲೂಕು ಉಜ್ಜಯನಿಯ ಎಸ್‌ಯುಜಿಎಸ್‌ ಕಾಲೇಜಿನ ಸುನೀತ ಎಚ್‌. 592 ಅಂಕ ಪಡೆದು ಮೂರನೇ ಸ್ಥಾನ ಗಳಿಸಿದ್ದಾರೆ.

ಈ ಬಾರಿಯ ಫಲಿತಾಂಶದಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ಅಖಂಡ ಬಳ್ಳಾರಿ ಜಿಲ್ಲೆಯ 26,093 ವಿದ್ಯಾರ್ಥಿಗಳ ಪೈಕಿ 16,807 ಜನರು ಉತ್ತೀರ್ಣಗೊಂಡಿದ್ದಾರೆ. ಬಾಲಕಿಯರು ಶೇ.73.92ರಷ್ಟು ಫಲಿತಾಂಶ ಪಡೆದಿದ್ದರೆ, ಬಾಲಕಿಯರು ಶೇ.53.97ರಷ್ಟು ಫಲಿತಾಂಶ ಗಳಿಸಿದ್ದಾರೆ. ಅಖಂಡ ಜಿಲ್ಲೆಯ ಪೈಕಿ ಬಳ್ಳಾರಿ ಜಿಲ್ಲೆ ಶೇ. 67.19ರಷ್ಟು ಫಲಿತಾಂಶ ಪಡೆದರೆ, ವಿಜಯನಗರ ಜಿಲ್ಲೆ ಶೇ.64.41ರಷ್ಟು ಫಲಿತಾಂಶ ಪಡೆದುಕೊಂಡಿದೆ. ಉಭಯ ಜಿಲ್ಲೆಗಳಲ್ಲಿ ಬಾಲಕಿಯರೇ ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಕಲಾವಿಭಾಗ:

ಕಲಾವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಎಸ್ಇಎಸ್‌ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಲ್.ಐಶ್ವರ್ಯ (586) ಹಾಗೂ ಬಳ್ಳಾರಿ ಮುನ್ಸಿಪಲ್ ಕಾಲೇಜಿನ ಬಾಲಾಜಿ (586) ಮೊದಲ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆಗೆ ಕೊಟ್ಟೂರಿನ ಇಂದು ಕಾಲೇಜಿನ ಸಂಜನಾಬಾಯಿ (597) ಮೊದಲ ಸ್ಥಾನ ಗಳಿಸಿದ್ದಾರೆ. ಇಟಗಿಯ ಪಂಚಮಸಾಲಿ ಪದವಿಪೂರ್ವ ಕಾಲೇಜಿನ ಕೆ.ನಿರ್ಮಲ (596) ದ್ವಿತೀಯ ಸ್ಥಾನ, ಕೊಟ್ಟೂರು ತಾಲೂಕು ಉಜ್ಜಯನಿಯ ಎಸ್‌ಯುಜಿಎಸ್‌ ಕಾಲೇಜಿನ ಸುನೀತ ಎಚ್‌. (592) ತೃತೀಯ ಸ್ಥಾನದಲ್ಲಿದ್ದಾರೆ.

ವಾಣಿಜ್ಯ ವಿಭಾಗ:

ವಾಣಿಜ್ಯ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಬಿಕೆಜಿ ಪದವಿಪೂರ್ವ ಕಾಲೇಜಿನ ವಾಲ್ವೇಕರ್ ಸ್ಪೂರ್ತಿ ಕೇಶವ್ (594) ಮೊದಲ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆ ಹೊಸಪೇಟೆಯ ಟಿಎಂಎಇಎಸ್ ಕಾಲೇಜಿನ ಪೂರ್ವಿ ಜಿ.ಎನ್. (594) ಮೊದಲ ಸ್ಥಾನದಲ್ಲಿದ್ದಾರೆ.

ಬಳ್ಳಾರಿಯ ಬಿಪಿಎಸ್‌ಸಿ ಕಾಲೇಜಿನ ವಿದ್ಯಾರ್ಥಿ ವಿನೋದ್ ಕುಮಾರ್ ಯು.(591) ದ್ವಿತೀಯ ಸ್ಥಾನ ಹಾಗೂ ಇದೇ ಕಾಲೇಜಿನ ಅಭಿಸಾರಿಕಾ (589) ತೃತೀಯ ಸ್ಥಾನದಲ್ಲಿದ್ದಾರೆ.

ವಿಜಯನಗರ ಜಿಲ್ಲೆ ಹಡಗಲಿಯ ಜಿಬಿಆರ್‌ ಕಾಲೇಜಿನ ವಿದ್ಯಾರ್ಥಿ ಐಶ್ವರ್ಯ ಡಿ. (592) ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ:

ವಿಜ್ಞಾನ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ವಿಶ್ವಜ್ಯೋತಿ ಪದವಿಪೂರ್ವ ಕಾಲೇಜಿನ ಎಚ್.ಎಂ.ಅಖಿಲ್ ಕುಮಾರ್ (592) ಹಾಗೂ ಬಳ್ಳಾರಿಯ ಸತ್ಯಂ ಪದವಿಪೂರ್ವ ಕಾಲೇಜಿನ ಜಿ.ವಿಠಲ ರೆಡ್ಡಿ (592) ಮೊದಲ ಸ್ಥಾನ ಗಳಿಸಿದ್ದರೆ, ಕೊಟ್ಟೂರಿನ ಇಂದು ಕಾಲೇಜಿನ ಎಲ್.ಆರ್.ಆಕಾಶ್ (594) ಅಂಕ ಪಡೆದು ವಿಜಯನಗರ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದಾರೆ.

ಸಂಡೂರು ಬಿಕೆಜಿ ಕಾಲೇಜಿನ ಯಶ್ವಂತ್ ಸಾಯಿ (591) ದ್ವಿತೀಯ ಸ್ಥಾನ ಪಡೆದರೆ, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿದ್ಯಾನಿಕೇತನ ಕಾಲೇಜಿನ ಟಿ.ಸೌಂದರ್ಯ (592) ದ್ವಿತೀಯ ಸ್ಥಾನದಲ್ಲಿದ್ದಾರೆ. ಬಳ್ಳಾರಿಯ ನಂದಿ ಕಾಲೇಜಿನ ಹರ್ಷದ್ ಅಲಿ (589) ತೃತೀಯ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆ ಹೊಸಪೇಟೆಯ ಸುರಭಿ ಪದವಿಪೂರ್ವ ಕಾಲೇಜಿನ ಅನನ್ಯ ಪ್ರಾಣೇಶ್ ಕುಲಕರ್ಣಿ 588 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.ಶಿಕ್ಷಣ ಪ್ರೇಮಿಗಳ ಬೇಸರ:

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಕುಸಿತ ಕಂಡಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ಪ್ರೌಢಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಕುಸಿಯುತ್ತಿರುವುದೇ ಕಾಲೇಜು ಫಲಿತಾಂಶದಲ್ಲೂ ಬಳ್ಳಾರಿ ಜಿಲ್ಲೆ ಹಿನ್ನಡೆ ಅನುಭವಿಸುತ್ತಿದೆ ಎಂದು ಶಿಕ್ಷಣ ಪ್ರೇಮಿಗಳು ಅಂದಾಜಿಸಿದ್ದಾರೆ. ಜಿಲ್ಲೆಯ ಫಲಿತಾಂಶವನ್ನು 10ನೇ ಸ್ಥಾನದೊಳಗೆ ಬರುವ ನಿರೀಕ್ಷೆಯಿತ್ತು. ಜಿಲ್ಲೆಯಲ್ಲಿನ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಪಪೂ ಕಾಲೇಜುಗಳ ಫಲಿತಾಂಶದ ಬಗ್ಗೆ ಅವಲೋಕನ ನಡೆಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಟಿ.ಪಾಲಾಕ್ಷಿ ತಿಳಿಸಿದ್ದಾರೆ.ವಿದ್ಯಾರ್ಥಿ-ಪೋಷಕರ ಕುತೂಹಲ:

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಹಿನ್ನೆಲೆ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಭವಿಷ್ಯದ ಕುತೂಹಲದಲ್ಲಿದ್ದರು. ಬೆಳಗ್ಗೆಯಿಂದಲೇ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದರು. ಪೋಷಕರು ಇದಕ್ಕೆ ಹೊರತಾಗಿರಲಿಲ್ಲ. ಮಕ್ಕಳ ಫಲಿತಾಂಶ ಏನಾಗಬಹುದು? ಎಷ್ಟು ಅಂಕ ಪಡೆಯಬಹುದು? ಎಷ್ಟು ಫಲಿತಾಂಶ ಬಂದರೆ ಯಾವ ಕಾಲೇಜು ಸೇರಿಸುವುದು ಸೂಕ್ತ ಎಂಬಿತ್ಯಾದಿ ಲೆಕ್ಕಾಚಾರದಲ್ಲಿದ್ದರು. ಫಲಿತಾಂಶ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಫಲಿತಾಂಶ ಪಡೆದು ಸಂಭ್ರಮಿಸಿದರು.

Share this article