ಸ್ವಾಮಿತ್ವ ಯೋಜನೆಯ ಮೂಲಕ ತಮ್ಮ ಆಸ್ತಿ ದಾಖಲೆ ಭದ್ರಪಡಿಸಿಕೊಳ್ಳಿ

KannadaprabhaNewsNetwork | Published : Jan 28, 2025 12:46 AM

ಸಾರಾಂಶ

ಯಳಂದೂರು ತಾಲೂಕಿನ ಕಟ್ನವಾಡಿ ಗ್ರಾಮದಲ್ಲಿ ನಡೆದ ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮಸಭೆಯನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ ಸೇರಿದಂತೆ ಅನೇಕರು ಇದ್ದರು.

ಕನ್ನಡಪ್ರಭ ವಾರ್ತೆ ಯಳಂದೂರು

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಗ್ರಾಮ ಠಾಣಾ ಸರಹದ್ದು ಪ್ರದೇಶಗಳಲ್ಲಿ ಇರುವ ಜನವಸತಿಗಳ ಗ್ರಾಮೀಣ ಆಸ್ತಿಗಳ ನಿಖರವಾದ ಹಕ್ಕುದಾಖಲೆಗಳು ಹಾಗೂ ಅಳತೆ ದಾಖಲೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ವಾಮಿತ್ವ ಯೋಜನೆಯ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ ನೀಡಿದರು.ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುವ ಪ್ರಥಮ ಗ್ರಾಮವಾದ ಕಟ್ನವಾಡಿ ಗ್ರಾಮದಲ್ಲಿ ಭೂಮಾಪಕ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಮಿತ್ವ ಯೋಜನೆಯ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಯೋಜನೆ ರಾಜ್ಯದಲ್ಲಿ ೨೦೨೨ ನೇ ಫೆ.೦೪ರಂದು ಆರಂಭಗೊಂಡಿದೆ.

ರಾಜ್ಯದ ೩೧ ಜಿಲ್ಲೆಗಳಲ್ಲಿ ೧.೪ ಲಕ್ಷ ಚ.ಕಿ.ಮೀ ಪ್ರದೇಶವನ್ನು ಡ್ರೋನ್ ಮೂಲಕ ಸರ್ವೆ ಮಾಡಿ ಗ್ರಾಮೀಣ ವಸತಿ ಆಸ್ತಿಯ ಭೂಮಿಯ ಹಕ್ಕು ದಾಖಲೆಗಳನ್ನು ರಾಜ್ಯ ಭೂ ದಾಖಲೆಗಳ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಯೋಗದಿಂದ ಸಿದ್ದಪಡಿಸಲಾಗುತ್ತಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮೊದಲು ಆಯ್ಕೆಯಾಗಿರುವ ಗ್ರಾಮ ಇದಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮನೆಗೆ ಬಂದಾಗ ಸೂಕ್ತ ನೆರವು ನೀಡಿ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ಇಂತಹ ಮಹತ್ವದ ಯೋಜನೆಗೆ ಎಲ್ಲಾ ರೀತಿಯ ನೆರವನ್ನು ನೀಡಬೇಕು ಎಂದರು.ಭೂ ಮಾಪನಾ ಇಲಾಖೆಯ ಎಡಿಎಲ್‌ಆರ್ ಉಮೇಶ್ ಮಾತನಾಡಿ, ಸ್ವಾಮಿತ್ವ ಯೋಜನೆಯು ರಾಜ್ಯದಲ್ಲಿ ಮೊದಲಿಗೆ ರಾಮನಗರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಆರಂಭಗೊಂಡಿತು. ಈಗ ಮೂರನೇ ಹಂತದಲ್ಲಿ ಇದು ನಡೆಯುತ್ತಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮೊದಲು ಆಯ್ಕೆಯಾದ ಗ್ರಾಮ ಕಟ್ನವಾಡಿ ಆಗಿದೆ. ಈ ಗ್ರಾಮದಲ್ಲಿ ಈಗಾಗಲೇ ಡ್ರೋನ್ ಸರ್ವೇ ಕಾರ್ಯ ನಡೆದಿದ್ದು ರಾಜ್ಯ ದೂರ ಸಂವೇದಿ ಅನ್ವಯಿಕ ಸಂಶೋಧನ ಸಂಸ್ಥೆಯು ಗ್ರಾಮೀನಾ ಆಸ್ತಿಗಳ ಚಿತ್ರವಿರುವ ನಕ್ಷೆಗಳನ್ನು ಒದಗಿಸಿರುತ್ತದೆ. ಪ್ರತಿ ಆಸ್ತಿಯನ್ನು ಸಮೀಕ್ಷೆ ನಡೆಸಿ ಹಕ್ಕು ದಾಖಲೆಗಳನ್ನು ನಾವು ಸಿದ್ದಪಡಿಸಬೇಕಿದೆ.

ಈ ದಾಖಲೆಗಳು ಸಿದ್ದಗೊಂಡ ನಂತರ ಪ್ರತಿ ಆಸ್ತಿಯ ಡ್ರಾಫ್ಟ್‌ನ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ವ್ಯತ್ಯಾಸಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಇದನ್ನು ಸಲ್ಲಿಸಬೇಕು. ನಂತರ ಕಾಯಂ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ. ಈ ದಾಖಲೆಗಳನ್ನು ಮಾರಾಟ, ವಿಭಾಗ, ಸಾಲ ಅಡಮಾನ ಇತ್ಯಾದಿ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಈ ಸಮೀಕ್ಷೆ ಕಾರ್ಯದಲ್ಲಿ ಪಿಡಿಒ, ಕಾರ್ಯದರ್ಶಿಗಳು, ಭೂಮಾಪಕರು ಜಂಟಿಯಾಗಿ ಪ್ರತಿ ಆಸ್ತಿಗಳನ್ನು ಸಮೀಕ್ಷೆ ಮಾಡಿ ದಾಖಲೆ ಸಿದ್ದಪಡಿಸುವುದರಿಂದ ಪ್ರತಿಯೊಬ್ಬರೂ ಇದಕ್ಕೆ ತಮ್ಮ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ, ಸದಸ್ಯರಾದ ಮಲ್ಲಣ್ಣ, ಮಹೇಂದರ್, ಜಿ. ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ಕಿನಕಹಳ್ಳಿ ಪ್ರಭುಪ್ರಸಾದ್, ರಾಜೇಂದ್ರ, ಪಿಎಸ್‌ಐ ಕರಿಬಸಪ್ಪ, ಅಧಿಕ್ಷಕ ರಾಧಾಕೃಷ್ಣ, ಪಿಡಿಒ ಮಹದೇವಸ್ವಾಮಿ, ಎಇಇ ಸಂತೋಷ್ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಮಹದೇವಪ್ಪ, ಕೆಸ್ತೂರು ಸಿದ್ದರಾಜು, ಮಧು ಸೇರಿದಂತೆ ಅನೇಕರು ಇದ್ದರು.

Share this article