)
ಕನ್ನಡಪ್ರಭ ವಾರ್ತೆ ಬೆಂಗಳೂರು
ಜಯನಗರದ ನಿವಾಸಿ ಪಿ.ಎನ್. ಸರೋಜ್ ಮಠಾರೆ ಬಂಧಿತನಾಗಿದ್ದು, ಆರೋಪಿಯಿಂದ ಆರು ಲ್ಯಾಪ್‌ಟಾಪ್‌ಗಳು ಹಾಗೂ ಒಂದು ಮೊಬೈಲ್ ಸೇರಿ ಎರಡು ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಹಲಸೂರು ಸಮೀಪದ ಖಾಸಗಿ ಕಂಪನಿಯಲ್ಲಿ ಲ್ಯಾಪ್ ಟಾಪ್‌ಗಳು ಕಳ್ಳತನವಾಗಿದ್ದವು. ಈ ಬಗ್ಗೆ ಆ ಕಂಪನಿಯ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಕೃತ್ಯದಲ್ಲಿ ಪರಿಚಿತರ ಕೈವಾಡ ಶಂಕಿಸಿದರು. ಬಳಿಕ ಕಂಪನಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಕಾವಲುಗಾರನ ಮೇಲೆ ಗುಮಾನಿಪಟ್ಟರು. ಈ ಸುಳಿವು ಆಧರಿಸಿ ಸರೋಜ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಎರಡು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕಾವಲುಗಾರನಾಗಿದ್ದ ಸರೋಜ್, ತನ್ನ ಕುಟುಂಬದ ಜತೆ ಜಯನಗರದ 3ನೇ ಹಂತದಲ್ಲಿ ವಾಸವಾಗಿದ್ದ. ಆದರೆ ಸಂಬಳ ವಿಚಾರದಲ್ಲಿ ಕಂಪನಿಯ ಆಡಳಿತ ಮಂಡಳಿ ಜತೆ ಆತನಿಗೆ ಮನಸ್ತಾಪವಾಯಿತು. ಈ ಹಿನ್ನಲೆಯಲ್ಲಿ ಕೆಲಸ ತೊರೆದಿದ್ದ ಆತ, ಬಾಕಿ ವೇತನ ಕೊಡುವಂತೆ ಕಂಪನಿಗೆ ಮನವಿ ಮಾಡಿದ್ದ. ಇದಕ್ಕೊಪ್ಪದೆ ಹೋದಾಗ ತನ್ನ ಬಳಿ ಇದ್ದ ಕೀ ಬಳಿ ಕಂಪನಿ ಬಾಗಿಲು ತೆರೆದು ಆರೋಪಿ ಲ್ಯಾಪ್‌ಟಾಪ್ ಕಳವು ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.