ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಿಗೆ ನೀಡಲಾಗಿದ್ದ ಗನ್ ಮ್ಯಾನ್ ಭದ್ರತೆಯನ್ನು ಹಿಂಪಡೆದು ವರುಷ ಉರುಳಿದೆ. ಪಿ.ಜೆ.ಸೋಮಶೇಖರ ಅವರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರ ಸ್ವೀಕರಿಸಿ ವರುಷ ಉರುಳಿದರೂ ಅವರಿಗೆ ಗನ್ ಮ್ಯಾನ್ ಭದ್ರತೆ ಒದಗಿಸುವಲ್ಲಿ ಪೊಲೀಸ್ ಆಯುಕ್ತರು ವಿಫಲರಾಗಿದ್ದಾರೆ.
ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಟು ಜಿಲ್ಲಾ ನ್ಯಾಯಾಧೀಶರು, ನಾಲ್ಕು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಔದ್ಯಮಿಕ ನ್ಯಾಯಾಧೀಕರಣದ ಪೀಠಾಸೀನಾಧಿಕಾರಿಗಳಿಗೆ ಸಶಸ್ತ್ರ ಮೀಸಲು ಪಡೆಯಿಂದ ಗನ್ ಮ್ಯಾನ್ ಭದ್ರತೆಯನ್ನು ಒದಗಿಸಿರುವಾಗ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಗನ್ ಮ್ಯಾನ್ ಭದ್ರತೆಯನ್ನು ನೀಡಲು ನಿರಾಕರಿಸಿರುವ ಪೊಲೀಸ್ ಆಯುಕ್ತರ ನಿರ್ಧಾರ ಅನುಮಾನಾಸ್ಪದವಾಗಿದೆ.6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ, ಸುಲಿಗೆ, ದರೋಡೆ, ಡಕಾಯತಿಯಂತಹ ಗಂಭೀರ ಅಪರಾಧ ಮತ್ತು ಅಪರಾಧಿಗಳ ವಿಚಾರಣೆ ನಡೆಯುತ್ತಿರುತ್ತದೆ. ಜೀವಾವಧಿ ಶಿಕ್ಷೆಯಿಂದ ಹಿಡಿದು ಗಲ್ಲು ಶಿಕ್ಷೆ ವಿಧಿಸಬಹುದಾದಂತಹ ಗಂಭೀರ ಅಪರಾಧ ಎಸಗಿರುವ ಆರೋಪಿಗಳು ಈ ನ್ಯಾಯಾಲಯಕ್ಕೆ ಬಂದು ಹೋಗುತ್ತಿರುತ್ತಾರೆ. ಹೀಗಿರುವಾಗ ಇಂತಹ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಧೀಶರಿಗೆ ಭದ್ರತೆ ಒದಗಿಸುವುದು ಪೊಲೀಸ್ ಆಯುಕ್ತರ ಕರ್ತವ್ಯ ಹಾಗೂ ಜವಾಬ್ದಾರಿ.
- ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು