ವೀರಸೇನಾನಿಗಳ ಅಪಮಾನಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ: ಬೋಪಯ್ಯ ಆಗ್ರಹ

KannadaprabhaNewsNetwork | Published : Nov 24, 2024 1:48 AM

ಸಾರಾಂಶ

ಅವಮಾನ ಪ್ರಕರಣವನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಖಂಡಿಸಿದ್ದಾರೆ. ಆರೋಪಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವೀರಸೇನಾನಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಪ್ರಕರಣವನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಖಂಡಿಸಿದ್ದು, ಆರೋಪಿ ಕೆ.ಆರ್. ವಿದ್ಯಾಧರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಕ್ರೋಶ ವ್ಯಕ್ತಪಡಿಸಿದ ಬೋಪಯ್ಯ, ಸಮಾಜದಲ್ಲಿ ಬಹಳ ದೊಡ್ಡ ಹೊಣೆಗಾರಿಕೆ, ಘನತೆ, ಗೌರವ ಹೊಂದಿರುವ ವಕೀಲ ವೃತ್ತಿಯಲ್ಲಿರುವವರೇ ಇಂಥ ಕೖತ್ಯ ಮಾಡಿದ್ದು ವಿಷಾದನೀಯ. ಈ ವಕೀಲನ ವಿರುದ್ಧ ಮಡಿಕೇರಿ ವಕೀಲರ ಸಂಘ ಅಗತ್ಯ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದರು.

ವೀರ ಸೇನಾನಿಗಳ ಬಗ್ಗೆ ಹಾಗೂ ಒಂದು ಜನಾಂಗದ ಬಗ್ಗೆ ಹೀಗೆ ಹೀನಾಯವಾಗಿ ಅಪಮಾನ ಮಾಡಿರುವುದರಿಂದ ಜನಾಂಗೀಯ ಸಂಘರ್ಷಕ್ಕೆ ದಾರಿ ಮಾಡಿದ್ದಾರೆ. ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲು ಮಾಡಬೇಕು. ದೇಶದ್ರೋಹ, ಭಯೋತ್ಪಾದಕ ಎಂದು ಪ್ರಕರಣ ದಾಖಲು ಮಾಡಬೇಕೆಂದು ಬೋಪಯ್ಯ ಒತ್ತಾಯಿಸಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬೋಪಯ್ಯ, ಆಡಳಿತ ಪಕ್ಷ ಇದ್ದಾಗ ಜನರ ಒಲವು ಆಡಳಿತ ಪಕ್ಷ ಕಡೆ ಇರುತ್ತದೆ. ಇದು ಮುಂದಿನ ರಾಜಕೀಯ ದಿಕ್ಸೂಚಿ ಅಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಆದರೆ ಮೂರು ಕ್ಷೇತ್ರಕ್ಕೆ ಅನುದಾನ ಹೆಚ್ಚು ನೀಡಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಗೆಲುವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ಸೇನಾನಿಗಳಿಗೆ ಅಪಮಾನ ಮಾಡಿರುವ ಆರೋಪಿಯನ್ನು ಕೊಡಗು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು. ಜಿಲ್ಲೆಯ ಶಾಸಕದ್ವಯರು ಘಟನೆ ಸಂಬಂಧಿತ ಖಂಡನೆಗೆ ಮಾತ್ರ ಸೀಮಿತವಾಗದೆ ಆರೋಪಿಗೆ ತಕ್ಕ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿಯೂ ಸೂಕ್ತ ಕ್ರಮಕ್ಕೆ ಆಸಕ್ತಿ ವಹಿಸುವಂತೆ ಆಗ್ರಹಿಸಿದರು.

ಕೊಡಗು ಜಿಲ್ಲೆ ದೇಶಕ್ಕೆ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಾಮಾನ್ಯ ಸೈನಿಕನಿಂದ ಹಿಡಿದು ಸೇನಾ ನಾಯಕರನ್ನು ಜಿಲ್ಲೆ ನೀಡಿದೆ. ಈ ಆರೋಪಿ ಸಮಾಜದಲ್ಲಿ ಒಡಕು ಮೂಡಿಸುವ ದೃಷ್ಟಿಯಿಂದ ಬೇರೊಬ್ಬರ ಸಿಮ್ ಬಳಸಿ ಫೀ.ಮಾ. ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಬಗ್ಗೆ ಕೀಳು ಶಬ್ಧ ಬಳಕೆ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ವಿದ್ಯಾಧರ ಯಾರೊಂದಿಗೆ ಓಡಾಟ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯ ಶಾಸಕರಿಗೆ ನಿಜವಾಗಿಯೂ ಕೊಡಗಿನ ಬಗ್ಗೆ ಕಾಳಜಿ ಇದ್ದರೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲೀರ ಚಲನ್, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಡಿಕೇರಿ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಹ್ಮಣಿ ಇದ್ದರು.

Share this article