ದೇವರನ್ನು ಧರ್ಮದ ನೆಲೆಯಲ್ಲಿ ಕಾಣಿ

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ಪ್ರಸ್ತುತ ದೇವರನ್ನು ಜಾತ್ಯತೀತ ನೆಲೆಯಲ್ಲಿ ಕಾಣುವ ಪರಿಸ್ಥಿತಿ ಬಂದಿದ್ದು, ಇದು ಸರಿಯಲ್ಲ ಎಂದ ಅವರು, ಹಿಂದೂ ಸಮಾಜ ಒಗ್ಗಟ್ಟಾಗಬೇಕು.

ಭಟ್ಕಳ: ದೇವರನ್ನು ಧರ್ಮದ ನೆಲೆಯಲ್ಲಿ ಕಾಣಬೇಕೇ ಹೊರತು ಜಾತ್ಯತೀತ ನೆಲೆಯಲ್ಲಿ ಕಾಣಬಾರದು. ದೇವರನ್ನು ಜಾತ್ಯತೀತ ನೆಲೆಯಲ್ಲಿ ಕಾಣುವ ಕುಹಕ ಬುದ್ಧಿ ಬಿಡಬೇಕು ಎಂದು ಗುರುಪುರದ ಶ್ರೀವಜ್ರದೇಹಿ ಮಠದ ಮಠಾಧೀಶ ಶ್ರೀರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಅವರು ಮುಟ್ಟಳ್ಳಿಯ ಅತೀ ಪುರಾತನ ಕೇತಪೈ ನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪ್ರಸ್ತುತ ದೇವರನ್ನು ಜಾತ್ಯತೀತ ನೆಲೆಯಲ್ಲಿ ಕಾಣುವ ಪರಿಸ್ಥಿತಿ ಬಂದಿದ್ದು, ಇದು ಸರಿಯಲ್ಲ ಎಂದ ಅವರು, ಹಿಂದೂ ಸಮಾಜ ಒಗ್ಗಟ್ಟಾಗಬೇಕು. ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ಕೊಡಬೇಕು. ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಕೊಟ್ಟು ಸಂಸ್ಕಾರಯುತರನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಬದಲಾಯಿಸುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ ಆದರೂ ನಮ್ಮ ರಾಜ್ಯದಲ್ಲಿ ಇದು ಜಾರಿಯಾಗಲು ರಾಜ್ಯ ಸರ್ಕಾರ ಮುಂದಾಗದೇ ಇರುವುದು ಬೇಸರದ ಸಂಗತಿ. ಮಕ್ಕಳಿಗೆ ಮಾತೃಮೂಲ ಶಿಕ್ಷಣದ ಅವಶ್ಯಕತೆ ಇದೆ.ಪಾಶ್ಚಾತ್ಯ ಶಿಕ್ಷಣದಿಂದ ನಾವು ನಮ್ಮತನ, ಆಚಾರ ವಿಚಾರ, ಸಂಸ್ಕಾರ ಮರೆಯುತ್ತಿದ್ದೇವೆ ಎಂದ ಅವರು, ಪುರಾತನ ದೇವಸ್ಥಾನ ಉಳಿಸಿಕೊಳ್ಳಬೇಕು. ನಮ್ಮ ಮುಂದಿನ ಪೀಳಿಗೆ ನಮ್ಮ ಸಂಸ್ಕೃತಿ, ನಮ್ಮ ಸಂಸ್ಕಾರದ ಬಗ್ಗೆ ಗೊತ್ತಿರಬೇಕು.ಮಹಾಕುಂಭ ಮೇಳದ ಕುರಿತಾಗಿ ಕೆಲವು ಕುಹುಕದ ಮಾತುಗಳನ್ನಾಡಿದ್ದಾರೆ.ಆದರೆ ಹೀಗೆ ಮಾತನಾಡಿದವರು ಅವರ ಮನಸ್ಸಿನ ಕೊಳಕನ್ನು ಹೊರಹಾಕಿ ಸ್ವತಃ ಅವರೆ ಹೊಲಸಾಗಿ ಹೊಗಿದ್ದಾರೆಯೆ ಹೊರತು ಹಿಂದೂ ಸಮಾಜ ಹೊಲಸಾಗಿಲ್ಲ ಎಂದರು.

ಮುಖ್ಯ ಅತಿಥಿಯಾಗಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಾವು ನಮ್ಮತನವನ್ನು ಮರೆಯಬಾರದು. ತ್ಯಾಗ ಬಲಿದಾನಗಳಿಂದ ಸಂರಕ್ಷಿಸಿಕೊಂಡು ನಮ್ಮ ಆಚಾರ ವಿಚಾರ,ಸಂಸ್ಕೃತಿ ಅಸ್ಮಿತೆ ಕಾಪಾಡಿಕೊಂಡು ಮಂದಿರ,ಮಠಮಾನ್ಯ ಉಳಿಸಿಕೊಂಡು ಬಂದಿರುವುದು ಸಾಧಾರಣ ವಿಷಯವಲ್ಲ ಎಂದರು.

ಮಾಜಿ ಶಾಸಕ ಸುನಿಲ್ ಬಿ ನಾಯ್ಕ, ಬಿಜೆಪಿ ಮಂಡಳದ ಅಧ್ಯಕ್ಷ ಲಕ್ಷ್ಮಿನಾರಾಯಣ ನಾಯ್ಕ, ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ್ ನಾಯ್ಕ, ನ್ಯಾಯವಾದಿ ರಾಜೇಶ ನಾಯ್ಕ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ನಾಗೇಶ ಪೈ, ದೇವಸ್ಥಾನದ ಆಡಳಿತ ಸಮಿತಿಯ ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು. ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

Share this article