ಕನ್ನಡಪ್ರಭ ವಾರ್ತೆ ಮೈಸೂರು
ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ತಂಬಾಕು, ಶುಂಠಿ ಆಹಾರ ಬೆಳೆಗಳನ್ನು ಮೂಲೆಗುಂಪು ಮಾಡಿವೆ. ಅಧಿಕ ಇಳುವರಿ ತಳಿಗಳ ದೆಸೆಯಿಂದ, ದೇಸಿ ಭತ್ತ ಮತ್ತು ಸಿರಿಧಾನ್ಯಗಳನ್ನು ಬೆಳೆಯುವವರೇ ಇಲ್ಲವಾಗಿದ್ದಾರೆ. ಹವಾಮಾನ ವೈಪರೀತ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ದೇಸಿ ತಳಿಗಳಲ್ಲಿ ಇದ್ದು, ಕೃಷಿ ಕ್ಷೇತ್ರವನ್ನು ಕಾಡುವ ಸಮಸ್ಯೆಗಳಿಗೆ ಇವು ಪರಿಹಾರ ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ದೇಸಿ ಬೀಜಗಳ ಮಹತ್ವವನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಬೀಜೋತ್ಸವ ಆಯೋಜಿಸಿದೆ.
ಎರಡು ದಿನಗಳ ಬೀಜೋತ್ಸವದಲ್ಲಿ 100ಕ್ಕೂ ಹೆಚ್ಚಿನ ದೇಸಿ ಭತ್ತ, ಸಿರಿಧಾನ್ಯ, ಬೇಳೆ ಕಾಳು, ಗಡ್ಡೆ ಗೆಣಸು, ಸೊಪ್ಪು, ತರಕಾರಿಯನ್ನು ಪ್ರದರ್ಶಿಸಲಾಗುವುದು. ವಿವಿಧ ಬಗೆಯ ಶೇಂಗಾ ತಳಿಗಳ ಪ್ರದರ್ಶನವಿದೆ. ಹುರುಳಿಯ ವಿವಿಧ ತಳಿಗಳು ಮತ್ತು ಮೌಲ್ಯವರ್ಧಿತ ಪದಾರ್ಥ ಪರಿಚಯಿಸಲಾಗುವುದು. ಅಪರೂಪದ ದೇಸಿ ತೊಗರಿ, ಮಡಕೆ ಹೆಸರು, ಕರಿ ಮತ್ತು ಹಸಿರು ಕಡಲೆ ಕೊಳ್ಳಲು ಸಿಗಲಿವೆ. ನಿರ್ಲಕ್ಷಿತ ಹಣ್ಣುಗಳ ಜ್ಯೂಸ್ ಪ್ರದರ್ಶನ ಮತ್ತು ಮಾರಾಟವಿದೆ ಎಂದರು.ಮುಂಗಾರಿಗೆ ಬಿತ್ತಲು ಸಿದ್ದ ಸಣ್ಣ, ರಾಜಮುಡಿ, ಸೇಲಂ ಸಣ್ಣ, ರತ್ನಚೂಡಿ, ಸಿಂಧೂರ ಮಧುಸಾಲೆ ಗಂಧ ಸಾಲೆ, ದೊಡ್ಡ ಬೈರ ನೆಲ್ಲು, ಬರ್ಮಾ ಬ್ಲಾಕ್, ಚಿನ್ನಪೊನ್ನಿ ಮೊದಲಾದ ದೇಸಿ ಭತ್ತ, ಜಗಳೂರು ರಾಗಿ ಮೊದಲಾದ ಸಿರಿಧಾನ್ಯಗಳು ಮತ್ತು ತರಕಾರಿ ಬೀಜಗಳು ಸಿಗಲಿವೆ.
ಬೀಜಮಾತೆ ಚಿನ್ನಮ್ಮ ಮೇಳವನ್ನು ಉದ್ಘಾಟಿಸುವರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಮತ್ತು ಜೆ.ಎಸ್.ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ದೇಸಿ ಬೀಜ ಸಂರಕ್ಷಣೆ ಹಾಗೂ ಜೀವ ವೈವಿಧ್ಯಕ್ಕಾಗಿ ಶ್ರಮಿಸುತ್ತಿರುವ ದೇಶದ ವಿವಿಧ ಭಾಗಗಳ ಬೀಜ ಸಂರಕ್ಷಕರು ಹಾಗೂ ರೈತ ಗುಂಪುಗಳು ಇದರಲ್ಲಿ ಪಾಲ್ಗೊಳ್ಳಲಿವೆ.