ಬೀಜೋತ್ಪಾದನಾ ರೈತರ ಲಾಭಕ್ಕೆ ಕನ್ನ ಹಾಕುತ್ತಿರುವ ಮಧ್ಯವರ್ತಿ

KannadaprabhaNewsNetwork |  
Published : Jul 06, 2026, 02:30 AM IST
ಪೋಟೊ5ಕೆಎಸಟಿ1: ಕುಷ್ಟಗಿ ಪಟ್ಟಣದ ಎಪಿಎಮ್ಸಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್‌ಸಾಬ ಮೂಲಿಮನಿ ಮಾತನಾಡಿದರು.  | Kannada Prabha

ಸಾರಾಂಶ

ಕಂಪನಿಗಳು ನೇರವಾಗಿ ರೈತರೊಂದಿಗೆ ವ್ಯವಹರಿಸುವ ಬದಲು ಏಜೆಂಟರ ಮೂಲಕ ವಹಿವಾಟು ನಡೆಸುತ್ತಿರುವುದರಿಂದ ರೈತರಿಗೆ ಸಿಗಬೇಕಾದ ಲಾಭದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತಿದೆ

ಕುಷ್ಟಗಿ: ಕೊಪ್ಪಳ ಜಿಲ್ಲೆ ರಾಜ್ಯದ ಪ್ರಮುಖ ತೋಟಗಾರಿಕೆ ಹಾಗೂ ಬೀಜೋತ್ಪಾದನಾ ಹಬ್ ಆಗಿ ಬೆಳೆಯುತ್ತಿದ್ದು, ಈ ಕ್ಷೇತ್ರದಲ್ಲಿ ಸಾವಿರಾರು ರೈತರು ತೊಡಗಿಸಿಕೊಂಡಿದ್ದಾರೆ. ಆದರೆ, ಕಳೆದ ಎರಡು-ಮೂರು ವರ್ಷಗಳಿಂದ ಕೆಲ ಖಾಸಗಿ ಬೀಜ ಕಂಪನಿಗಳು ಹಾಗೂ ಮಧ್ಯವರ್ತಿಗಳಿಂದ ರೈತರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ರೈತರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರ್‌ಸಾಬ ಮೂಲಿಮನಿ ಒತ್ತಾಯಿಸಿದರು.

ಪಟ್ಟಣದ ಎಪಿಎಮ್ಸಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಕಂಪನಿಗಳು ರೈತರಿಗೆ ಯಾವುದೇ ಲಿಖಿತ ಒಪ್ಪಂದವಿಲ್ಲದೆ ಬೀಜೋತ್ಪಾದನೆ ಮಾಡಿಸಿ ಬಳಿಕ ಮೌಖಿಕ ಕರಾರು ಉಲ್ಲಂಘಿಸುತ್ತಿವೆ. ಬೀಜ ಖರೀದಿ ಸಂದರ್ಭದಲ್ಲಿ ದರ ಕಡಿಮೆ ಮಾಡುವುದು, ಗುಣಮಟ್ಟದ ಹೆಸರಿನಲ್ಲಿ ಅನಗತ್ಯ ಕಡಿತ ಮಾಡುವುದು, ತೂಕದಲ್ಲಿ ವ್ಯತ್ಯಾಸ ತರುವುದು ಹಾಗೂ ಒಂದು ಕ್ವಿಂಟಲ್‌ಗೆ 10 ಕೆಜಿ ಸೂಟ್ ಕಡಿತ ಮಾಡುವ ಮೂಲಕ ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಕಂಪನಿಗಳು ನೇರವಾಗಿ ರೈತರೊಂದಿಗೆ ವ್ಯವಹರಿಸುವ ಬದಲು ಏಜೆಂಟರ ಮೂಲಕ ವಹಿವಾಟು ನಡೆಸುತ್ತಿರುವುದರಿಂದ ರೈತರಿಗೆ ಸಿಗಬೇಕಾದ ಲಾಭದ ಬಹುಪಾಲು ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಕುರಿತು ಕಳೆದ ವರ್ಷ ಜಿಲ್ಲಾಧಿಕಾರಿಗಳಿಗೆ ರೈತ ಸಂಘದಿಂದ ಲಿಖಿತ ದೂರು ಸಲ್ಲಿಸಲಾಗಿತ್ತು. ಬಳಿಕ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರೈತರು, ಕೃಷಿ ಇಲಾಖೆ ಅಧಿಕಾರಿ ಹಾಗೂ ಬೀಜ ಕಂಪನಿಗಳ ಸಭೆ ನಡೆದಿದ್ದು, ರೈತರ ಹಿತರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆದರೂ ಹಲವಾರು ಕಂಪನಿ ಇನ್ನೂ ನಿಯಮ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬೀಜ ಕಂಪನಿಗಳು ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ಪರವಾನಗಿ ಮತ್ತು ನೋಂದಣಿ ಪಡೆದುಕೊಂಡ ಬಳಿಕವೇ ಬೀಜೋತ್ಪಾದನೆ ನಡೆಸಬೇಕು. ರೈತರೊಂದಿಗೆ ಕಡ್ಡಾಯವಾಗಿ ಲಿಖಿತ ಒಪ್ಪಂದ (MOU) ಮಾಡಿಕೊಂಡು ಖರೀದಿ ದರ, ಗುಣಮಟ್ಟದ ಮಾನದಂಡ, ತೂಕ, ಸೂಟ್ ಹಾಗೂ ಪಾವತಿ ಷರತ್ತು ಮುಂಚಿತವಾಗಿಯೇ ಸ್ಪಷ್ಟಪಡಿಸಬೇಕು. ರೈತರಿಗೆ ನೀಡುವ ಮುಂಗಡ ಹಣಕ್ಕೆ ಯಾವುದೇ ಬಡ್ಡಿ ವಿಧಿಸಬಾರದು ಹಾಗೂ ಅನ್ಯಾಯವಾಗಿ ಸೂಟ್ ಕಡಿತ ಮಾಡುವ ಪದ್ಧತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಕೊಪ್ಪಳ ಜಿಲ್ಲೆ ಬೀಜೋತ್ಪಾದನಾ ಹಬ್ ಆಗಿ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಕಂಪನಿಗಳ ಶೋಷಣೆ ಮುಂದುವರಿದರೆ ರೈತರು ಬೀಜೋತ್ಪಾದನೆಯಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರಿಗಳು ಕಂಪನಿಗಳ ಪರವಾಗಿ ಅಲ್ಲ, ರೈತರ ಪರವಾಗಿ ಕಾರ್ಯ ನಿರ್ವಹಿಸಿ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಬೀಜೋತ್ಪಾದನಾ ರೈತರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ ಹೋರಾಟ ರೂಪಿಸಲಾಗುವುದು. ರೈತರು ಯಾವುದೇ ಕಾರಣಕ್ಕೂ ಲಿಖಿತ ಒಪ್ಪಂದವಿಲ್ಲದೆ ಬೀಜೋತ್ಪಾದನೆ ಕೈಗೊಳ್ಳಬಾರದು. ಕಾನೂನುಬದ್ಧ ಒಪ್ಪಂದ ಮಾಡಿಕೊಂಡ ಬಳಿಕವೇ ಬೀಜೋತ್ಪಾದನೆ ಆರಂಭಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಡಬಸಪ್ಪ ಸಜ್ಜಲಗುಡ್ಡ, ಯಮನೂರ ಮಡಿವಾಳ ಉಪಸ್ಥಿತರಿದ್ದರು.ಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ಮುಕ್ತ ನಾಳೆಗೆ ಮುನ್ನುಡಿ ಬರೆದ ಕೈದಿಗಳ ಸೃಜನಶೀಲತೆ
ಕೈಗಾರಿಕಾ ಸಂಘಗಳು ನೋಂದಣಿ ಮಾಡಿಕೊಳ್ಳಲಿ: ಸಾಜಿದ್ ಮುಲ್ಲಾ