ಮರಿಯಮ್ಮನಹಳ್ಳಿ: ಮುಂಗಾರು ಬೇಸಾಯದಲ್ಲಿ ರೈತರಿಗೆ ಬಹು ಕಾಡುವ ಸಮಸ್ಯೆಗಳಲ್ಲಿ ರೋಗಬಾಧೆ ಮತ್ತು ಇಳುವರಿ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಬೇಸಾಯ ಮಾಡುವಾಗ ಕೆಲ ಜಾಗೃತಿ ವಹಿಸಬೇಕು ಎಂದು ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶಿವಮೂರ್ತಿ ರಾಥೋಡ ಸಲಹೆ ನೀಡಿದರು.
ವ್ಯವಸಾಯದಲ್ಲಿ ಮಣ್ಣಿನ ಫಲವತ್ತತೆ ಪ್ರಮುಖವಾದದ್ದು, ಬೀಜದಿಂದ ಅನೇಕ ಹಾನಿಕಾರಕ ರೋಗಾಣುಗಳಾದ ಶಿಲೀಂಧ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆಯುವಾಗ ಸಸಿಗಳು ಬೆಳೆಯುವಾಗ ಜತೆಯಲ್ಲಿ ಬೆಳೆಯ ವಿವಿಧ ಬೆಳವಣಿಗೆಯ ಹಂತಗಳಲ್ಲಿ ರೋಗವು ಉಲ್ಬಣಿಸಿ ಇಳುವರಿ ಹಾನಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಬೀಜೋಪಚಾರ ಅಥವಾ ಸಾವಯವದ ಬೀಜಾಮೃತ ವಿಧಾನಗಳನ್ನು ಬಳಸಿ ಅಧಿಕ ಇಳುವರಿ ಹಾಗೂ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಅವರು ಹೇಳಿದರು.
ಬೀಜ ಮೊಳಕೆಯೊಡೆಯುವಿಕೆ ಹಾಗೂ ಸಸಿಗಳ ಬೆಳವಣಿಗೆ ಉತ್ತಮಗೊಳ್ಳಲು ಬೀಜಾಮೃತ ವಿಧಾನ ಅತ್ಯಂತ ಸಹಕಾರಿಯಾಗುತ್ತದೆ. ಮಳೆಯಾಶ್ರಿತ ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಬೇಕು. ಅತಿವೃಷ್ಟಿ, ಅನಾವೃಷ್ಟಿಯ ವೇಳೆಯಲ್ಲಿ ರೈತರಿಗೆ ಆಗುವ ಆರ್ಥಿಕ ನಷ್ಟ ಸರಿದೂಗಿಸಲು ಬೆಳೆವಿಮೆ ಸಹಾಯಾವಾಗುತ್ತದೆ ಎಂದು ಅವರು ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ತಾಲೂಕು ಯೋಜನಾಧಿಕಾರಿ ಮಾರುತಿ, ಜಿಲ್ಲಾ ನೋಡಲ್ ಅಧಿಕಾರಿ ಶಿವು ಮರಡಿ ಸೇರಿದಂತೆ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.