ರಾಜ್ಯಾದ್ಯಂತ ಸಂಭ್ರಮದ ಸೀಗೆ ಹುಣ್ಣಿಮೆ ಆಚರಣೆ

KannadaprabhaNewsNetwork |  
Published : Oct 08, 2025, 01:01 AM IST
ಸೀಗಿಹುಣ್ಣಿಮೆ ಅಂಗವಾಗಿ ಹುಬ್ಬಳ್ಳಿಯ ಹೊರವಲಯದಲ್ಲಿ ರೈತರು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಆಶ್ವೀಜ ಶುದ್ಧ ಹುಣ್ಣಿಮೆ ನಿಮಿತ್ತ ಮಂಗಳವಾರ ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬವನ್ನು ಆಚರಿಸಲಾಯಿತು. ಅದರಲ್ಲೂ ವಿಶೇಷವಾಗಿ, ಉತ್ತರ ಕರ್ನಾಟಕ ಭಾಗದಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಬ್ಬದ ಆಚರಣೆಯ ರಂಗು ಮೇರೆ ಮೀರಿತ್ತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಆಶ್ವೀಜ ಶುದ್ಧ ಹುಣ್ಣಿಮೆ ನಿಮಿತ್ತ ಮಂಗಳವಾರ ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬವನ್ನು ಆಚರಿಸಲಾಯಿತು. ಅದರಲ್ಲೂ ವಿಶೇಷವಾಗಿ, ಉತ್ತರ ಕರ್ನಾಟಕ ಭಾಗದಲ್ಲಿ, ಗ್ರಾಮೀಣ ಭಾಗಗಳಲ್ಲಿ ಹಬ್ಬದ ಆಚರಣೆಯ ರಂಗು ಮೇರೆ ಮೀರಿತ್ತು.

ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಹಬ್ಬವೆಂದೇ ಕರೆಯುವ ಸೀಗೆ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸಿದರು. ಬಹುತೇಕ ಕಡೆ ಗ್ರಾಮಗಳಲ್ಲಿ ರೈತರು ಹೊಲಗಳಿಗೆ ಕುಟುಂಬ ಸಮೇತರಾಗಿ ತೆರಳಿ ಹೊಲದಲ್ಲೇ ಪಾಂಡವರನ್ನು ಸ್ಥಾಪಿಸಿ, ಪೂಜೆ ಮಾಡಿ, ಬಗೆಬಗೆಯ ಖಾದ್ಯ ಮಾಡಿಕೊಂಡು ನೈವೇದ್ಯ ಮಾಡಿ ಹೊಲದ ತುಂಬೆಲ್ಲ ಚರಗ ಚೆಲ್ಲಿದರು. ಬಳಿಕ ಕುಟುಂಬದ ಬಂಧು-ಬಳಗ, ಸ್ನೇಹಿತರು ಸೇರಿ ಎಲ್ಲರೂ ಒಟ್ಟಾಗಿ ಕುಳಿತು ಸಹಪಂಕ್ತಿ ಭೋಜನ ಮಾಡುವ ಮೂಲಕ ಸೀಗೆಹುಣ್ಣಿಮೆಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.

ಚಕ್ಕುಲಿ, ಕೋಡುಬಳೆ, ಹೋಳಿಗೆ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಕಡಬು, ಶೇಂಗಾ ಹೋಳಿಗೆ, ಹುರಕ್ಕಿ ಹೋಳಿಗೆ, ಎಳ್ಳು ಹೋಳಿಗೆ, ಕರ್ಚಿಕಾಯಿ, ಕಡಬು, ಮೊಸರನ್ನ, ಚಿತ್ರಾನ್ನ, ಸಜ್ಜಿ, ರಾಗಿ, ಬಿಳಿಜೋಳ ಸೇರಿದಂತೆ ಬಗೆಬಗೆಯ ರೊಟ್ಟಿ, ಪುರಿ, ಹಪ್ಪಳ, ಸಂಡಿಗೆ, ತೊಗರಿ, ಕಡಲೆಕಾಳು, ಅಲಸಂದಿ, ಹೆಸರುಕಾಳಿನ ಪಲ್ಲೆ, ಬದನೆಕಾಯಿ, ಆಲುಗಡ್ಡೆ ಪಲ್ಲೆ ಹೀಗೆ ತರಹೇವಾರಿ ಖಾದ್ಯ ತಯಾರಿಸಿ ಹೊಲಗಳಿಗೆ ಕುಟುಂಬ ಸಮೇತರಾಗಿ ಹೋಗಿ ಭೂತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಹೊಲದಲ್ಲಿಯೇ ಊಟ ಮಾಡಿ ಮರಳಿ ತಮ್ಮ ಮನೆಗಳಿಗೆ ತೆರಳಿದರು.

ಹೊಲದಲ್ಲಿ ಸಹಪಂಕ್ತಿ ಭೋಜನ ಸವಿದ ಬಳಿಕ ಹಿರಿಯರು ಗಿಡಗಳ ಕೆಳಗಿನ ನೆರಳಿನಲ್ಲಿ ನಿದ್ರೆಗೆ ಜಾರಿದರೆ, ಚಿಣ್ಣರು ಹೊಲಗಳಲ್ಲಿಯೇ ಬಣ್ಣ ಬಣ್ಣದ ಗಾಳಿಪಟ ಹಾರಿಸಿದರು. ಇನ್ನು ಕೆಲ ಮಕ್ಕಳು ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು.ಪಾಂಡವರಿಗೆ ವಿಶೇಷ ಪೂಜೆ:

ಪಾಂಡವರಿಗೂ ಸಹ ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷ. ಕೆಲವೆಡೆ ಹಸುವಿನ ಸಗಣಿಯಿಂದ ಪಾಂಡವರನ್ನು ತಯಾರಿಸಿದರೆ ಕೆಲವು ಭಾಗಗಳಲ್ಲಿ ತಮ್ಮ ಹೊಲದಲ್ಲೇ ಇರುವ ಚಿಕ್ಕ ಕಲ್ಲು ತೆಗೆದುಕೊಂಡು ಅದಕ್ಕೆ ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಸಿಂಗರಿಸಿ ಪಾಂಡವರನ್ನಾಗಿಸಿ ಪೂಜೆ ಸಲ್ಲಿಸುತ್ತಾರೆ.

ಹುಲಿಗೆಮ್ಮನ ದರ್ಶನಕ್ಕೆ ಭಕ್ತರ ನೂಕುನುಗ್ಗಲು:

ಸೀಗೆ ಹುಣ್ಣಿಮೆ ಅಂಗವಾಗಿ ಮಂಗಳವಾರ ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಯ ದರ್ಶನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಇದರಿಂದಾಗಿ ನೂಕುನುಗ್ಗಲು, ಕಾಲ್ತುಳಿತ, ಗೊಂದಲ, ಮೇಲಾಟ ನಡೆಯಿತು. ಹರಕೆ ಹೊತ್ತ ಭಕ್ತರು ಹರಕೆ ತೀರಿಸಲು ಪರದಾಡಿದರು. ಹೊಳೆ ಸ್ನಾನ ಮಾಡಿಕೊಂಡು ಬರಲು ಜನ ಮುಗಿಬಿದ್ದರು.

ಕಾಲ್ತುಳಿತಕ್ಕೆ ಬಾಲಕ, ವಯೋವೃದ್ಧ ಹಾಗೂ ಮಹಿಳೆ ಸಿಕ್ಕಿ ವಿಲವಿಲ ಒದ್ದಾಡುವ ವಿಡಿಯೋ ಸಹ ವೈರಲ್ ಆಗಿದೆ. ಶೀಗೆ ಹುಣ್ಣಿಮೆ ಜೊತೆಯಲ್ಲಿ ಮಂಗಳವಾರವೂ ಆಗಿದ್ದರಿಂದ ದೇವಿಯ ದರ್ಶನಕ್ಕೆ ನಿರೀಕ್ಷೆಗೂ ಮೀರಿ ಭಕ್ತ ಸಾಗರ ಬಂದಿತ್ತು. ದೇವಿಯ ದರ್ಶನಕ್ಕೆ ಬೆಳಗ್ಗೆಯಿಂದಲೇ ಭಕ್ತರು ಕಿಕ್ಕಿರಿದು ಸೇರಿದ್ದರು. ಹಲವಾರು ಗ್ರಾಮ, ಊರುಗಳಿಂದ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಆಗಮಿಸಿ ದೇವಿಯ ದರ್ಶನ ಪಡೆದರು. ಇದರಿಂದ ಗಂಟೆಗಟ್ಟಲೆ ಟ್ರಾಫಿಕ ಜಾಮ್ ಕೂಡ ಉಂಟಾಗಿತ್ತು. ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ ಅರಸಿದ್ದಿ ಅವರೇ ಹುಲಗಿಗೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಶ್ರಮಿಸಿದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ